ಬೆಂಗಳೂರು, ಜೂ 08 (DaijiworldNews/SM): ಈ ಹಿಂದೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಕ್ಷಣಹಿಂದಿನ ಸರಕಾರದ ಕೆಲವೊಂದು ನಿಯಮಗಳನ್ನು ಬದಲಾಯಿಸಿತ್ತು. ಅದರಂತೆ ಇದೀಗ ಕಾಂಗ್ರೆಸ್ ಸರಕಾರ ಬಿಜೆಪಿ ಸರಕಾರದ ಕೆಲವು ನಿರ್ಧಾರ ಬದಲಾಯಿಸಲು ಮುಂದಾಗಿದ್ದಾರೆ. ಅವುಗಳಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆ ಪ್ರಮುಖವಾಗಿದೆ. ಈ ಶೈಕ್ಷಣಿಕ ವರ್ಷದಿಂದಲೇ ಪಠ್ಯ ಪರಿಷ್ಕರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ವಿದ್ಯಾರ್ಥಿಗಳಿಗೆ ತಪ್ಪು ವಿಚಾರಗಳನ್ನು ಬೋಧಿಸಬಾರದು. ಈ ಕಾರಣದಿಂದಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಅನಿವಾರ್ಯ ಎಂದಿದ್ದಾರೆ. ಈ ಹಿಂದೆ ಅನೇಕ ಬಾರಿ ಪಠ್ಯ ಪರಿಷ್ಕರಣೆಯಾಗಿದೆ. ಈ ನಡುವೆ ಈಗಾಗಲೇ ಪುಸ್ತಕಗಳನ್ನು ಶಾಲೆಗಳಿಗೆ ಕಳುಹಿಸಲಾಗಿದೆ ಬದಲಾವಣೆ ಅಸಾಧ್ಯ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಹಿಂದೆ ಕೆಲವು ಸರಕಾರಗಳು ನಡೆಸಿದಂತೆ ಈ ವರ್ಷವೇ ಬದಲಾವಣೆ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.
ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಕಡತಗಳು ನನ್ನ ಕಚೇರಿಗೆ ತಲುಪಿವೆ. ಅವುಗಳನ್ನು ಪರಿಷ್ಕರಣೆ ಮಾಡಲಾಗುವುದು. ಯಾವ ರೀತಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರಿಷ್ಕರಣೆ ಮಾಡಬಹುದೆಂಬುವುದನ್ನು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.