ಬೆಂಗಳೂರು, ಜೂ 09 (DaijiworldNews/SM) : ಕ್ರೈಸ್ತ ಸಮುದಾಯದ ಮೇಲಿನ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಿ, ಮಣಿಪುರದಲ್ಲಿ ಶಾಂತಿ ಪುನರ್ ಸ್ಥಾಪಿಸಬೇಕು. ಗಲಭೆ ಪೀಡಿತ ರಾಜ್ಯದಲ್ಲಿ ಶೀಘ್ರದಲ್ಲೇ ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸ್ಸು ಮಾಡಬೇಕು ಎಂದು ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಪೋರಮ್ನ ನಿಯೋಗ, ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.
ಶುಕ್ರವಾರದಂದು ರಾಜಭವನದಲ್ಲಿ ರಾಜ್ಯಪಾಲರ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾದ ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಮ್ನ ನಿಯೋಗ ಮಣಿಪುರದಲ್ಲಿನ ದುಷ್ಕರ್ಮಿಗಳ ದಾಳಿಯಿಂದ ಹಾನಿಗೊಳಗಾದ ಮನೆಗಳು ಮತ್ತು ಚರ್ಚ್ಗಳನ್ನು ಮರುನಿರ್ಮಾಣ ಮಾಡಬೇಕು. ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೂಡಲೇ ಪರಿಹಾರ ನೀಡಬೇಕು. ಗಲಭೆ ಹಿನ್ನೆಲೆಯಲ್ಲಿ ವ್ಯಾಪಾರ ನಷ್ಟಕ್ಕೆ ಒಳಗಾದ ವ್ಯಾಪಾರಿಗಳಿಗೆ ಪರಿಹಾರ ನೀಡಬೇಕು. ಕ್ರೈಸ್ತ ಸಮುದಾಯದ ಸುರಕ್ಷತೆಯನ್ನು ಖಾತರಿಪಡಿಸಬೇಕು. ಅಲ್ಲದೆ, ಗಲಭೆಗೆ ಕುಮ್ಮಕ್ಕು ನೀಡಿದ ಮತ್ತು ಘಟನೆಗೆ ಕಾರಣರಾದ ಎಲ್ಲಾ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ನಿಯೋಗ ಆಗ್ರಹಿಸಿದೆ.
ರಾಜ್ಯಪಾಲರನ್ನು ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಮ್ನ ನಿಯೋಗದ ಅಧ್ಯಕ್ಷ ಅಂಥೋಣಿ ವಿಕ್ರಮ್, ಪದಾಧಿಕಾರಿಗಳಾದ ಗೋಪಿ, ಜಾನ್ ಚಂದ್ರನ್, ರಾಬಿನ್ಸನ್, ಸ್ಟಾನಿಸ್ ರಾಜಾ ನೇತೃತ್ವದ ನಿಯೋಗ ಭೇಟಿ ನೀಡಿ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಮನವಿ ಮಾಡಿದೆ.