ಕೋಲ್ಕ್ಕತ್ತಾ, ಜೂ 10 (DaijiworldNews/MS): ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಪಂಚಾಯತ್ ಚುನಾವಣೆ ಘೋಷಣೆಯಾದ ಕೂಡಲೇ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಆರಂಭವಾಗಿದ್ದು. ಶುಕ್ರವಾರ ರಾತ್ರಿ ಕಾಂಗ್ರೆಸ್ ಕಾರ್ಯಕರ್ತನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮುರ್ಷಿದಾಬಾದ್ ಜಿಲ್ಲೆಯ ಖಡ್ಗ್ರಾಮ್ನ ಪೊಲೀಸ್ ಠಾಣೆ ವ್ಯಾಪ್ತಿಯ ರತನ್ಪುರ ನಲ್ದೀಪ್ನಲ್ಲಿ ಅಪರಿಚಿತ ದುಷ್ಕರ್ಮಿಗಳು ಕಾರ್ಯಕರ್ತನ ಮೇಲೆ ಗುಂಡಿಕ್ಕಿ ಕೊಂದಿದ್ದಾರೆ.
ಮೃತರನ್ನು ಫೂಲ್ಚಂದ್ ಎಂದು ಗುರುತಿಸಲಾಗಿದೆ, ಅವರು ವಲಸೆ ಕಾರ್ಮಿಕರಾಗಿ ದುಡಿಯುತ್ತಿದ್ದು, ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಕೇರಳದಲ್ಲಿ ಕೆಲಸ ಮಾಡುತ್ತಿದ್ದ ಅವರು 10 ದಿನಗಳ ಹಿಂದೆ ಬಂಗಾಳದ ತಮ್ಮ ಗ್ರಾಮಕ್ಕೆ ಬಂದಿದ್ದರು.
ತನ್ನ ಸ್ನೇಹಿತರೊಂದಿಗೆ ಇಸ್ಪೀಟು ಆಡುತ್ತಿದ್ದಾಗ ಗುಂಡಿನ ದಾಳಿ ನಡೆದಿದೆ. ಪೊಲೀಸರ ಪ್ರಕಾರ, ಗೂಂಡಾಗಳ ಗುಂಪು ಫೂಲ್ಚಂದ್ ಮತ್ತು ಅವನ ಸ್ನೇಹಿತರ ಮೇಲೆ ದಾಳಿ ಮಾಡಿ ಗುಂಡು ಹಾರಿಸಿತು.
ಈ ಘಟನೆಯ ನಂತರ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಪಶ್ಚಿಮ ಬಂಗಾಳ ರಾಜ್ಯಪಾಲರಿಗೆ ಪತ್ರ ಬರೆದು ಚುನಾವಣೆಗೆ ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಒತ್ತಾಯಿಸಿದ್ದಾರೆ. ಜುಲೈ 8 ರಂದು ಪಶ್ಚಿಮ ಬಂಗಾಳದಲ್ಲಿ ಪಂಚಾಯತ್ ಚುನಾವಣೆಗಳು ನಡೆಯಲಿವೆ.