ನೋಯ್ಡಾ, ಜೂ 12 (DaijiworldNews/MS): ನೋಯ್ಡಾದ ಖಾಸಗಿ ಸ್ಟುಡಿಯೋದಲ್ಲಿ ಆಯೋಜಿಸಲಾಗಿದ್ದ ಫ್ಯಾಷನ್ ಶೋ ವೇಳೆ ರಾಂಪ್ ವಾಕ್ ಮಾಡುವಾಗ ಕಬ್ಬಿಣದ ಪಿಲ್ಲರ್ ಬಿದ್ದು 24 ವರ್ಷದ ಯುವ ಮಾಡೆಲ್ ಸಾವನ್ನಪ್ಪಿ, ಮತ್ತೋರ್ವ ಗಾಯಗೊಂಡ ಘಟನೆ ನಡೆದಿದೆ.
ಮೃತರನ್ನು ಗ್ರೇಟರ್ ನೋಯ್ಡಾದ ಗೌರ್ ಸಿಟಿ-2 ಯ ನಿವಾಸಿ ವಂಶಿಕಾ ಚೋಪ್ರಾನಿ ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವಕನನ್ನು ಬಾಬಿ ರಾಜ್ ಎಂದು ಗುರುತಿಸಲಾಗಿದ್ದು, ನೋಯ್ಡಾದ ಸೆಕ್ಟರ್ 16 ಎ ನಲ್ಲಿರುವ ಫಿಲ್ಮ್ ಸಿಟಿಯ ಲಕ್ಷ್ಮಿ ಸುಡಿಯೋದಲ್ಲಿ ಈ ಅಪಘಾತ ಸಂಭವಿಸಿದೆ.
ವೇದಿಕೆ ಮೇಲೆ ಲೈಟ್ಸ್ಗಾಗಿ ಅಳವಡಿಸಲಾಗಿದ್ದ ಕಬ್ಬಿಣದ ಕಂಬವನ್ನು ಅಳವಡಿಸಲಾಗಿತ್ತು. ರಾಂಪ್ ವಾಕ್ ವೇಳೆ ಕಬ್ಬಿಣದ ಕಂಬ ಬಿದ್ದಿದೆ. ತಕ್ಷಣ ವಂಶಿಕಾ ಮತ್ತು ಬಾಬಿ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾಡೆಲ್ ಮೃತಪಟ್ಟಿದ್ದಾರೆ. ಯುವಕನಿಗೆ ಚಿಕಿತ್ಸೆ ಮುಂದುವರಿದಿದೆ.
ಘಟನೆಯ ನಂತ್ರ, ಫ್ಯಾಷನ್ ಶೋ ಆಯೋಜಕರು ಮತ್ತು ಇತರ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಶಿಕಾ ಅವರ ಸಾವಿನ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪೊಲೀಸರು ಫ್ಯಾಷನ್ ಶೋ ಆಯೋಜಕ ಮತ್ತು ಲೈಟಿಂಗ್ ಕಾರ್ಯದಲ್ಲಿ ತೊಡಗಿದ್ದ 4 ಜನರನ್ನು ಬಂಧಿಸಿದ್ದಾರೆ ಎಂದು ನೋಯ್ಡಾದ ಹೆಚ್ಚುವರಿ ಡಿಸಿಪಿ ಮೋಹನ್ ಅವಸ್ತಿ ತಿಳಿಸಿದ್ದಾರೆ.ಫ್ಯಾಷನ್ ಶೋಗೆ ಯಾವುದೇ ಅನುಮತಿ ನೀಡಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.