ಬೆಂಗಳೂರು, ಜೂ 14 (DaijiworldNews/MS): ಬಿಜೆಪಿ ಮಾಡಿದ ಲೂಟಿಗಳನ್ನು ವಾಪಸ್ ಕಕ್ಕಿಸುತ್ತೇವೆ ಪ್ರತಾಪ್ ಸಿಂಹ ಅವರೇ ಚಿಂತಿಸಬೇಡಿ ಎಂದು ರಾಜ್ಯ ಕಾಂಗ್ರೆಸ್ ಘಟಕ ಟ್ವೀಟ್ ಮಾಡಿ ಬಿಜೆಪಿಗೆ ಟಾಂಗ್ ಕೊಟ್ಟಿದೆ.
ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಅಡ್ಜಸ್ಟ್ ಮೆಂಟ್ ರಾಜಕಾರಣದ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್ ಘಟಕ, ರಿಟೈರ್ಡ್ ಹರ್ಟ್ ಆಗಿರುವ ಸಿ.ಟಿ ರವಿ ಈಗ ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ, ಅವರ ಅರಣ್ಯ ರೋಧನಕ್ಕೆ ಪ್ರತಾಪ್ ಸಿಂಹ ದನಿ ಜೋಡಿಸಿದ್ದಾರೆ.
ಇಬ್ಬರಿಗೂ ದಮ್ಮು ತಾಕತ್ತು ಇದ್ದರೆ ಅಡ್ಜಸ್ಟಮೆಂಟ್ ಮಾಡಿಕೊಂಡ ತಮ್ಮ ಪಕ್ಷದ ನಾಯಕರ ಹೆಸರು ಹೇಳಿ ಆರೋಪಿಸಲಿ. ಅಂದಹಾಗೆ ಬಿಜೆಪಿಯೊಂದಿಗೆ ಅಡ್ಜಸ್ಟ್ ಮಾಡಿಕೊಂಡಿದ್ದ ಕುಮಾರಸ್ವಾಮಿ ತಲೆ ಸವರಿಕೊಂಡು ನಗುತ್ತಿದ್ದಾರಂತೆ ಅಲ್ಲವೇ ಎಂದು ಪ್ರಶ್ನಿಸಿದೆ.
ಪ್ರತಾಪ್ ಸಿಂಹ ಅವರೇ, ಚಿಂತಿಸಬೇಡಿ, ಬಿಜೆಪಿಯ ಎಲ್ಲಾ ಹಗರಣಗಳು, ಅಕ್ರಮಗಳು, ಲೂಟಿಗಳನ್ನು ತನಿಖೆಗೆ ವಹಿಸುತ್ತೇವೆ. ಮುಲಾಜು ಮಾಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯ ಯಾರೊಬ್ಬರ ಅಂಜಿಕೆಯೂ ನಮಗಿಲ್ಲ. ಬಿಜೆಪಿ ಮಾಡಿದ ಲೂಟಿಗಳನ್ನು ವಾಪಸ್ ಕಕ್ಕಿಸುತ್ತೇವೆ!ತನಿಖೆಗೆ ತಾವೂ ಕೂಡ ಸಾಕ್ಷಿ ನೀಡಬಹುದು, ತಮ್ಮ ನಾಯಕರ ಲೂಟಿ ಬಗ್ಗೆ ನಿಮಗೆ ಹೆಚ್ಚು ತಿಳಿದಿರುತ್ತದೆ ಎ ಂದು ಮತ್ತೊಂದು ಟ್ವೀಟ್ ನಲ್ಲಿ ಕಾಳೆಲೆದಿದೆ
ಬಿಜೆಪಿಯಲ್ಲಿ ಸೋಲಿನ ಅವಲೋಕನ ಚೆನ್ನಾಗಿಯೇ ನಡೆಯುತ್ತಿದೆ.ಬೊಮ್ಮಾಯಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡುತ್ತಿರುವ ಸಂಸದ ಪ್ರತಾಪ್ ಸಿಂಹ ಹಾಗೂ ಸಿ.ಟಿ. ರವಿ ಅವರ ಹೇಳಿಕೆಗಳ ಹಿಂದಿರುವುದು ಮತ್ತದೇ ಜೋಶಿ, ಸಂತೋಷ್ ಜೋಡಿ. ಸೋಲಿನ ನಂತರ ನಾಪತ್ತೆಯಾಗಿರುವ ಈ ಜೋಡಿ ತೆರೆಯ ಹಿಂದೆ ನಿಂತು ಕಲ್ಲು ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ.