ಮೈಸೂರು, ಜೂ. 16 (DaijiworldNews/SM): ಹೆಚ್ಚುವರಿ ಅಕ್ಕಿ ಕೊಡಲ್ಲವೆಂದು ಕೇಂದ್ರ ಸರ್ಕಾರ ಪತ್ರ ಬರೆದಿದೆ. ಅಕ್ಕಿ ನೀಡದಿರುವುದನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತೆ. ನಾವು ಪುಕ್ಸಟ್ಟೆ ಕೇಳಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ನಮಗೆ ಕೊಡಬೇಕಾಗುತ್ತೆಂದು ಎಲ್ಲಾ ರಾಜ್ಯಕ್ಕೂ ಕೊಡಲ್ಲ ಅಂದಿದ್ದಾರೆ. ಈ ಬಗ್ಗೆ ದೊಡ್ಡ ಹೋರಾಟ ಮಾಡುತ್ತೇವೆ, ರೂಪುರೇಷೆ ಬಗ್ಗೆ ನಾಳೆ ಹೇಳುತ್ತೇನೆ ಎಂದರು.
ಕರ್ನಾಟಕ ರಾಜ್ಯದ ರೈತರಿಂದಲೇ ಅಕ್ಕಿ ಖರೀದಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಓಪನ್ ಮಾರ್ಕೆಟ್ನಲ್ಲಿ ಅಕ್ಕಿ ಖರೀದಿ ಮಾಡಲು ಸಾಧ್ಯವಿಲ್ಲ. ಕೆಲವು ಸಂಸ್ಥೆಗಳು, ಬೇರೆ ಏಜೆನ್ಸಿಗಳ ಮೂಲಕ ಖರೀದಿ ಮಾಡಬೇಕು. ಯಾರ ಬಳಿಯೂ ಬೆಟ್ಟು ತೋರಿಸುಕೊಳ್ಳುವ ರೀತಿ ಕೆಲಸ ಮಾಡುವುದಿಲ್ಲ. ತಿನ್ನುವ ಅಕ್ಕಿ ಹಾಗೂ ಬಡವರ ಮೇಲೆ ರಾಜಕೀಯ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಈ ವಿಚಾರವಾಗಿ ಹೈಕಮಾಂಡ್ ಜೊತೆ ಮಾತನಾಡಲು ಸಿಎಂ ಸಿದ್ಧರಾಮಯ್ಯ ಅವರು ಜೂ.21 ರಂದು ದೆಹಲಿಗೆ ತೆರಳಲಿದ್ದಾರೆ. ಇದೇ ವೇಳೆ ಭೇಟಿಗೆ ಅವಕಾಶ ಸಿಕ್ಕರೆ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳನ್ನೂ ಭೇಟಿಯಾಗಿ ಬರಲಿದ್ದಾರೆ. ಸೌಜನ್ಯ ಭೇಟಿ ವೇಳೆ ರಾಜ್ಯದ ವಿಚಾರಗಳ ಬಗ್ಗೆಯೂ ಪ್ರಸ್ತಾಪಿಸುವ ಸಾಧ್ಯತೆಯಿದೆ. ಅದರಲ್ಲೂ ಮುಖ್ಯವಾಗಿ ಅನ್ನಭಾಗ್ಯಕ್ಕೆ ನೀಡುವ ಅಕ್ಕಿ ಬಗ್ಗೆ ಚರ್ಚೆ ನಡೆಸಲಿದ್ದು, ರಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.