ಉತ್ತರ ಪ್ರದೇಶ, ಜೂ 17 (DaijiworldNews/MS): ಕಳೆದ 24 ಗಂಟೆಗಳಲ್ಲಿ ಬಿಸಿಲಿನ ತೀವ್ರತೆಯಿಂದ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ 34 ಮಂದಿ ಸಾವನ್ನಪ್ಪಿದ್ದಾರೆ.
"ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಏರುತ್ತಿದ್ದು, ತೀವ್ರ ಶಾಖದಿಂದ ಜನ ತತ್ತರಿಸುತ್ತಿದ್ದು, ಜನರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರು" ಎಂದು ಮುಖ್ಯ ವೈದ್ಯಾಧಿಕಾರಿ (ಸಿಎಂಒ) ಡಾ.ಜಯಂತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಎರಡು ದಿನದಲ್ಲಿ 34 ಮಂದಿ ಸಾವನ್ನಪ್ಪಿದ್ದು, ಜೂ.15ರಂದು 23 ಮಂದಿ ಹಾಗೂ ಜೂ.16ರಂದು 11 ಮಂದಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಮೃತರೆಲ್ಲರೂ ನಾನಾ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದರೊಂದಿಗೆ, ವಯಸ್ಸಾದವರಿಗೆ ಬಿಸಿಲಿನ ತಾಪವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ.
ರೋಗಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ವಿಶ್ರಾಂತಿಗಾಗಿ ಮತ್ತು ಬಿಸಿಲಿನ ಶಾಖದ ಅಪಾಯವನ್ನು ತಡೆಗಟ್ಟಲು ಆಸ್ಪತ್ರೆಯಲ್ಲಿ ಫ್ಯಾನ್, ಕೂಲರ್ ಮತ್ತು ಹವಾನಿಯಂತ್ರಣಗಳನ್ನು ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಹೀಟ್ ಸ್ಟ್ರೋಕ್ ತಡೆಗಟ್ಟಲು ಮುನ್ನೆಚ್ಚರಿಕೆಗಳನ್ನು ಜನ ಅನುಸರಿಸಬೇಕಾಗಿದೆ. ಬೇಸಿಗೆಯ ಬಿಸಿಲು, ತಾಪಮಾನ ಇವೆಲ್ಲಾ ನಿರ್ಜಲಿಕರಣ, ತಲೆಸುತ್ತು, ತಲೆನೋವು ಹೀಗೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ದಿವಾಕರ್ ಸಿಂಗ್ ಮಾಹಿತಿ ನೀಡಿದ್ದಾರೆ.