ಮಂಡ್ಯ, ಜೂ 21 (DaijiworldNews/MS): ವರ್ಗಾವಣೆ ಹೊಂದಿ ಹೊಸ ಸ್ಥಳಗಳಿಗೆ ನೇಮಕಗೊಳ್ಳುವುದು, ಈ ವೇಳೆ ಅಧಿಕಾರ ಹಸ್ತಾಂತರ ಮಾಡುವುದು ಸರ್ಕಾರಿ ಅಧಿಕಾರಿಗಳಿಗೆ ಸಮಾನ್ಯ ಸಂಗತಿ. ಆದರೆ ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ಅಧಿಕಾರ ಹಸ್ತಾಂತರವೂ ಭಾವುಕ ಘಟನೆಗೆ ಸಾಕ್ಷಿಯಾಗಿದೆ.
ಒಂದೆಡೆ ತಂದೆಯ ವರ್ಗಾವಣೆ, ಮತ್ತೊಂದೆಡೆ ಅದೇ ಸ್ಥಳಕ್ಕೆ ಮಗಳ ನಿಯೋಜನೆ ಹೀಗಾಗಿ ತಂದೆಯಿಂದಲೇ ಮಗಳು ಪೋಲಿಸ್ ಠಾಣೆಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ. ಠಾಣೆಯಲ್ಲಿ ಎಸ್ಐ ಆಗಿದ್ದ ಬಿ.ಎಸ್.ವೆಂಕಟೇಶ್ ಅವರು ತನ್ನ ಮಗಳೂ ಆದ ನೂತನ ಎಸ್ಐ ಬಿ.ವಿ.ವರ್ಷಾ ಅವರಿಗೆ ಮಂಗಳವಾರ ಅಧಿಕಾರ ಹಸ್ತಾಂತರ ಮಾಡಿದ್ದು ವಿಶೇಷ ಸಂದರ್ಭವಾಗಿತ್ತು. ಇದಕ್ಕೆ ಠಾಣೆಯ ಸಿಬ್ಬಂದಿ ಸಾಕ್ಷಿಯಾಗಿದ್ದರು. ಈ ವೇಳೆ ಸಿಬ್ಬಂದಿ ಮತ್ತು ಅಲ್ಲಿಗೆ ಆಗಮಿಸಿದ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
2022ರ ಬ್ಯಾಚ್ನಲ್ಲಿ ಪಿಎಸ್ಐ ಆಗಿರುವ ವರ್ಷಾ ಅವರು ಕಲುಬುರಗಿಯಲ್ಲಿ ತರಬೇತಿ ಮುಗಿಸಿ ಮಂಡ್ಯದಲ್ಲೇ ಒಂದು ವರ್ಷ ಪ್ರೊಬೆಷನರಿ ಅಧಿಕಾರಿಯಾಗಿ ಈಗ ಮಂಡ್ಯದಲ್ಲಿಯೇ ಸೆಂಟ್ರಲ್ ಠಾಣೆ ಎಸ್ ಐ ಆಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ವೆಂಕಟೇಶ ತುಮಕೂರು ಜಿಲ್ಲೆ ಹುಲಿಯೂರು ದುರ್ಗದವರು. 16 ವರ್ಷಗಳ ಕಾಲ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ್ದು, 2010ರ ಬ್ಯಾಚ್ನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ 2ನೇ ಬಾರಿ ವೃತ್ತಿ ಜೀವನ ಆರಂಭಿಸಿದ್ದರು.