ಬೆಂಗಳೂರು, ಜೂ 25 (DaijiworldNews/HR): ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ವಿತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಟೆಂಡರ್ ಕರೆಯಲು ಸಿಎಂ ಸೂಚನೆ ನೀಡಿದ್ದು, ಒಂದು ವಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರಿ ಏಜೆನ್ಸಿಗಳು ಹೇಳಿವೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ಅಕ್ಕಿ ಗೊಂದಲದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಕೆ.ಎಚ್.ಮುನಿಯಪ್ಪ, ಹಣಕಾಸು ಹಾಗೂ ಆಹಾರ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಶನಿವಾರ ಸಭೆ ನಡೆಸಿದ್ದು, ಸರ್ಕಾರಿ ಏಜೆನ್ಸಿಗಳಾದ ಎನ್.ಸಿ.ಸಿ.ಎಫ್, ನಾಫೆಡ್ ಹಾಗೂ ಕೇಂದ್ರೀಯ ಭಂಡಾರಗಳು ಸಲ್ಲಿಸಿರುವ ದರ ಪಟ್ಟಿ ಕುರಿತು ಚರ್ಚಿಸಿ ಟೆಂಡರ್ ಕರೆಯುವಂತೆ ಸೂಚನೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಮುನಿಯಪ್ಪ, ತಕ್ಷಣವೇ ಟೆಂಡರ್ ಕರೆಯಲು ಸೂಚಿಸಲಾಗಿದ್ದು, ಒಂದು ವಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಸರ್ಕಾರಿ ಏಜೆನ್ಸಿಗಳು ಹೇಳಿವೆ. ಈ ಹಿಂದೆಯೂ ಇದೇ ಸಂಸ್ಥೆಗಳಿಂದ ಅಕ್ಕಿ ಖರೀದಿಸಲಾಗಿತ್ತು. ಈ ಸಂಸ್ಥೆಗಳು ಅಕ್ಕಿ ಪೂರೈಸಿದ ಬಳಿಕ ವಿತರಣೆ ಮಾಡಲಾಗುವುದು. ಈ ಮೂರು ಸಂಸ್ಥೆಗಳು ನೀಡಿರುವ ದರ ಪಟ್ಟಿ ಸಮಾಲೋಚಿಸಲಾಗಿದೆ ಎಂದು ತಿಳಿಸಿದ್ದಾರೆ.