ಬೆಂಗಳೂರು, ಜೂ 26 (DaijiworldNews/MS): ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿರುವ ಮಾಜಿ ಸಚಿವ ವಿ. ಸೋಮಣ್ಣ"ನನಗಿಂತ ಬುದ್ಧಿವಂತರು ಸಿಕ್ಕರೆ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿ" ಎಂದು ಹೇಳುವ ಮೂಲಕ ಪಕ್ಷಕ್ಕೆ ಹೊಸ ಸವಾಲು ಹಾಕಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಸುಮ್ಮನೆ ಕೂತಿರುವವನಲ್ಲ, ನಿದ್ದೆ ಮಾಡಲ್ಲ ಬೇರೆಯವರಿಗೂ ನಿದ್ದೆ ಮಾಡಲು ಬಿಡಲ್ಲ, ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ, ನನಗಿಂತ ಬುದ್ಧಿವಂತರು ಸಿಕ್ಕರೆ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಲಿ, ಅವಕಾಶ ಕೊಟ್ಟರೆ ನಿಭಾಯಿಸುತ್ತೇನೆ. ಇಲ್ಲವೇ ಪಕ್ಷ ಹೇಳುವ ಕೆಲಸ ಮಾಡಿಕೊಂಡಿರುತ್ತೇನೆ ಎಂದು ಹೇಳಿದರು.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬೌಂಡರಿ, ಸಿಕ್ಸರ್ ಬಾರಿಸಲು ಹೋಗಿ ಬೌಲ್ಡ್ ಆಗಿದ್ದೇನೆ. ನಾನು ಸುಮ್ಮನೆ ಕೂತಿರುವವನಲ್ಲ, ನಾನು ಸನ್ಯಾಸಿಯೂ ಅಲ್ಲ, ಪಕ್ಷ ಏನು ತೀರ್ಮಾನ ಮಾಡುತ್ತದೆ ಎಂದು ನೋಡಬೇಕು.ಕಳೆದ 45 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನಾನು ಪಕ್ಷ ಹೇಳಿದ ಕೆಲಸ ಮಾಡಿದ್ದೇನೆ. ಎಂಥಹ ಸಂದರ್ಭದಲ್ಲೂ ವಿಚಲಿತನಾಗಿಲ್ಲ. ಪಕ್ಷ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ. ಇಲ್ಲದಿದ್ದರೆ ಬೇಸರ ಇಲ್ಲ ಎಂದೂ ಇದೇ ವೇಳೆ ಸೋಮಣ್ಣ ಹೇಳಿದರು.