ಕೊಪ್ಪಳ, ಜೂ 26 (DaijiworldNews/MS): ಬಸ್ ನಿಲ್ಲಿಸದ ಕಾರಣ ಸಿಟ್ಟಿಗೆದ್ದು ಮಹಿಳೆಯೊಬ್ಬರು ಸರ್ಕಾರಿ ಬಸ್ ಗೆ ಕಲ್ಲು ಎಸೆದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ಭಾನುವಾರ ನಡೆದಿದ್ದು ಮಹಿಳೆಗೆ ದಂಡ ವಿಧಿಸಲಾಗಿದೆ.
ಇಳಕಲ್ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬವರು ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನ ಪಡೆಯಲು ಬಂದಿದ್ದರು. ಆದರೆ ಹುಲಿಗೆ ಕ್ರಾಸ್ ಬಳಿ ಬಹಳಷ್ಟು ಹೊತ್ತಿನಿಂದ ಕಾದರೂ ಬಸ್ ನಿಲ್ಲಿಸಿರಲಿಲ್ಲ. ಇದರಿಂದ ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ವೇಗದೂತ ಬಸ್ ಕೊಪ್ಪಳದಿಂದ-ಹೊಸಪೇಟೆಗೆ ಹೊರಟ ಬಸ್ ಗೆ ಕಲ್ಲು ಎಸೆದಿದ್ದರು.
ಬಸ್ನ ಚಾಲಕ ಕಲ್ಲು ಎಸೆದ ಮಹಿಳೆಯ ಸಮೇತ ಬಸ್ ಅನ್ನು ಮುನಿರಾಬಾದ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಮಹಿಳೆಯಿಂದ 5 ಸಾವಿರ ದಂಡ ಕಟ್ಟಿಸಿಕೊಂಡು ವಾಪಸ್ ಕಳುಹಿಸಿದ್ದಾರೆ. ''ನನ್ನ ಮುಂದೆಯೇ ಹಲವು ಬಸ್ಗಳು ಹೋದರೂ ನಿಲ್ಲಿಸಲಿಲ್ಲ. ಮಳೆ ಕೂಡ ಬರುತ್ತಿತ್ತು. ಇಳಕಲ್ಗೆ ಹೋಗುವ ಬಸ್ಗಾಗಿ ಮಳೆಯಲ್ಲಿ ನಾಲ್ಕೈದು ತಾಸು ಕಾದು ಕುಳಿತಿದ್ದೆ. ಬಸ್ ನಿಲ್ಲಿಸದ ಕಾರಣ ಸಿಟ್ಟು ಬಂದು ಕಲ್ಲು ಎಸೆದೆ'' ಎಂದು ಲಕ್ಷ್ಮಿ ಹೇಳಿದ್ದಾರೆ.
ಕಲ್ಲು ಎಸೆದಿದ್ದರಿಂದ ಬಸ್ ಗಾಜು ಒಡೆದಿದ್ದು, ಅದೃಷ್ಟವಶಾತ್ ಕಲ್ಲು ಬಸ್ ಒಳಗೆ ಬಿದ್ದಿಲ್ಲ, ಇಲ್ಲವಾದರೆ ಪ್ರಯಾಣಿಕರಿಗೆ ಗಾಯವಾಗುತ್ತಿತ್ತು ಎಂದು ನಿರ್ವಾಹಕ ಮುಕ್ಕಣ ಕುಕನೂರ್ ಹೇಳಿದ್ದಾರೆ.