ಬೆಂಗಳೂರು, ಜೂ 27 (DaijiworldNews/HR): ನನಗೂ ಬೆಂಗಳೂರಿಗೂ ಇರುವ ಸಂಬಂಧದ ಇತಿಹಾಸದ ಬಗ್ಗೆ ಅಶ್ವತ್ ನಾರಾಯಣ ಅವರಿಗೆ ಗೊತ್ತಿಲ್ಲ. ನನಗೂ ಬೆಂಗಳೂರಿಗೂ ಇರುವ ಸಂಬಂಧದ ಬಗ್ಗೆ ಅವರು ಮೊದಲು ತಿಳಿದುಕೊಳ್ಳಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ನಾನು 6ನೇ ವಯಸ್ಸಿಗೆ ಶಿಕ್ಷಣ ಪಡೆಯಲು ನಮ್ಮೂರಿನಿಂದ ಬೆಂಗಳೂರಿಗೆ ಬಂದೆ. ಇಲ್ಲಿನ ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸೇರಿ ನನ್ನ ವಿದ್ಯಾಭ್ಯಾಸ ಆರಂಭಿಸಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಕೆಂಪೇಗೌಡರು ಕಟ್ಟಿದ ಪ್ರದೇಶ. ತಮಿಳುನಾಡಿನ ಗಡಿ ಭಾಗದಲ್ಲಿ ಸಂಗಮದ ಬಳಿ ಕೆಂಪೇಗೌಡರ ಕೋಟೆ ಇದೆ. ಅದರ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಆ ಕೋಟೆ ಸಮೀಪ ನಿಜಲಿಂಗಪ್ಪ ಅವರ ಮನೆ ಪಕ್ಕ ವೀರೇಂದ್ರ ಪಾಟೀಲ್ ಅವರ ಮನೆ ಇದೆ. ಅದರ ಪಕ್ಕದಲ್ಲಿ ನನ್ನ ತಂದೆ ದೊಡ್ಡಹಾಲಹಳ್ಳಿ ಕೆಂಪೇಗೌಡರ ಮನೆ ಇದೆ. ಇತ್ತೀಚೆಗೆ ಅದನ್ನು ಮಾರಿದ್ದೇನೆ. ಇದು ನನಗೂ ಕೆಂಪೇಗೌಡ ಕಟ್ಟಿದ ಬೆಂಗಳೂರಿಗೆ ಇರುವ ಸಂಬಂಧ ಎಂದರು.
ಇನ್ನು ಇಂದು ನಾವು ಬೆಂಗಳೂರಿನ ಅಭಿವೃದ್ಧಿ ವಿಚಾರದಲ್ಲಿ ಮೂವರು ಮಹನೀಯರನ್ನು ಸ್ಮರಿಸಬೇಕು ಅದು ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಹಾಗೂ ಎಸ್.ಎಂ ಕೃಷ್ಣ. ಇವರು ಕಟ್ಟಿರುವ ಬೆಂಗಳೂರನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ಕೆಂಪೇಗೌಡರ ಸ್ಥಂಭ ಹೇಗೆ ಸ್ಮಾರಕವಾಗಿದೆಯೋ ಅದೇ ರೀತಿ ನಾವು ನಮ್ಮ ಕೆಲಸಗಳ ಮೂಲಕ ಸಾಕ್ಷಿಗುಡ್ಡೆ ನಿರ್ಮಿಸಬೇಕು ಎಂದು ಹೇಳಿದ್ದಾರೆ.