ಮುಂಬೈ, ಜೂ 28 (DaijiworldNews/MS): ಬಕ್ರಿದ್ ಹಬ್ಬ ಸಂದರ್ಭದಲ್ಲಿ ಕುರ್ಬಾನಿ ಪ್ರಾಮುಖ್ಯವಾದ ಸ್ಥಾನ ಪಡೆದಿದೆ. ಬಕ್ರೀದ್ ನ ಶುಭ ಸಂದರ್ಭದಲ್ಲಿ ಮೇಕೆ, ಕುರಿ, ಆಡುಗಳನ್ನು ಬಲಿ ನೀಡಲಾಗುತ್ತದೆ.
ಮುಂಬೈನಲ್ಲಿ ನಡೆದ ವಿಚಿತ್ರ ಘಟನೆಯೊಂದರಲ್ಲಿ ಸೊಸೈಟಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೋರ್ವ ಕುರ್ಬಾನಿಗಾಗಿ ಎರಡು ಮೇಕೆಗಳನ್ನು ತನ್ನ ಬಹು ಮಹಡಿಯ ವಸತಿ ಸಮುಚ್ಚಯದಲ್ಲಿದ್ದ ಫ್ಲ್ಯಾಟ್ ಗೆ ಕರೆತಂದ ಘಟನೆ ನಡೆದಿದೆ.
ಮುಂಬೈನ ಜೆಪಿ ನಾರ್ತ್ ಹೈ-ರೈಸ್ ಸೊಸೈಟಿಯಲ್ಲಿ ವಾಸಿಸುವ ಮೊಹ್ಸಿನ್ ಖಾನ್ ಯಾರಿಗೂ ತಿಳಿಯದಂತೆ ರಾತ್ರಿ ೩ ಗಂಟೆ ವೇಳೆಗೆ ಕದ್ದು ಮುಚ್ಚಿ ಲಿಫ್ಟ್ ಮೂಲಕ ಮೇಕೆ ತಂದು ತನ್ನ ಮನೆಯಲ್ಲಿರಿಸಿದ್ದಾರೆ. ಈ ವಿಚಾರ ವಸತಿ ಸಮುಚ್ಚಯದ ಇತರ ನಿವಾಸಿಗಳಿಗೆ ತಿಳಿದು ನಿಯಮ ಮೀರಿ ಪ್ರಾಣಿಗಳನ್ನು ತಂದ ವ್ಯಕ್ತಿಗೆ ಮೇಕೆ ಹೊರಗೊಯ್ಯುವಂತೆ ಹೇಳಿದ್ದಾರೆ. ಆದರೆ ಇದಕ್ಕೊಪ್ಪದ ಮೊಹ್ಸಿನ್ ಖಾನ್ ವಿರುದ್ದ ನಿವಾಸಿಗಳೆಲ್ಲಾ ಒಂದೆಡೆ ಸೇರಿ ‘ಹನುಮಾನ್ ಚಾಲೀಸಾ’ ಪಠಣದ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಕೊನೆಗೂ ಗಲಾಟೆ ಜೋರಾಗುತ್ತಿದ್ದಂತೆ ಪೊಲೀಸರು ಮಾಹಿತಿ ದೊರೆದು ಮೊಹ್ಸಿಲ್ ಖಾನ್ ಮನೆಯಲ್ಲಿದ್ದ ಮೇಕೆಯನ್ನು ಹೊರಹಾಕಿದ್ದಾರೆ. ಸೊಸೈಟಿ ಒಳಗೆ ಯಾವುದೇ ಕಾರಣಕ್ಕೂ ಪ್ರಾಣಿ ವಧೆಗೆ ಅವಕಾಶ ನೀಡಲಾಗುವುದಿಲ್ಲ. ಪ್ರಾಣಿ ವಧೆಗೆ ಮೀಸಲಿರಿಸಿದ ಜಾಗದಲ್ಲಿ ಮಾತ್ರ ಅವಕಾಶ ನೀಡಲಾಗುವುದು ಎಂದು ಪೊಲೀಸರ ಎಚ್ಚರಿಕೆ ನೀಡಿದ್ದಾರೆ.