ಕೋಲಾರ, ಜೂ 28 (DaijiworldNews/MS): ಬೇರೆ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಕತ್ತು ಹಿಸುಕಿ ಮರ್ಯಾದ ಹತ್ಯೆ ಮಾಡಿದ್ದು, ಇದರಿಂದ ಮನನೊಂದ ಪ್ರಿಯಕರ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದೆ.
ಕೊಲೆಯಾದ ಯುವತಿ ಕೀರ್ತಿ(20) ಪ್ರಿಯಕರ ಗಂಗಾಧರ್(24)ಕೂಡ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆರೋಪಿ ಯುವತಿ ತಂದೆ ಕೃಷ್ಣಮೂರ್ತಿ(46)ಯನನ್ನು ಪೊಲೀಸರು ಬಂಧಿಸಿದ್ದಾರೆ.
ಕೀರ್ತಿ ಕೆಜಿಎಫ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಗಂಗಾಧರ್ ತಮಟೆ ಕಲಾವಿದನಾಗಿದ್ದು ಗಾರೆ ಕೆಲಸ ಮಾಡುತ್ತಿದ್ದ. ಕೀರ್ತಿ ತಂದೆ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ. ಕೀರ್ತಿ ಹಾಗೂ ಗಂಗಾಧರ್ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಈ ಸಂಬಂಧ ಗಂಗಾಧರ್ ತಮ್ಮ ಪ್ರೀತಿಯ ವಿಚಾರವನ್ನು ಕೀರ್ತಿಯ ತಂದೆ ಕೃಷ್ಣಮೂರ್ತಿ ಬಳಿ ಹೇಳಿದ್ದಾನೆ. ಅಲ್ಲದೆ ಮದುವೆ ಮಾಡಿಕೊಡುವಂತೆಯೂ ಕೇಳಿಕೊಂಡಿದ್ದಾನೆ. ಆದರೆ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡಿಯಾಗಿದೆ. ಇಬ್ಬರ ಮದುವೆಗೆ ಕೀರ್ತಿಯ ತಂದೆ ಒಪ್ಪಿಗೆ ಸೂಚಿಸಿರಲಿಲ್ಲ ಎಂದು ತಿಳಿದುಬಂದಿದೆ.
ಗಂಗಾಧರ್ನನ್ನು ಮರೆತುಬಿಡುವಂತೆ ಪೋಷಕರು ಕೀರ್ತಿಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದಾರೆ. ಸೋಮವಾರ ರಾತ್ರಿಯೂ ಇದೇ ವಿಚಾರವಾಗಿ ಜಗಳ ನಡೆದಿದ್ದು, ಈ ವೇಳೆ ಯುವತಿ ಅವನನ್ನೇ ಮದುವೆಯಾಗುವುದಾಗಿ ಹಟ ಹಿಡಿದಿದ್ದಾಳೆ. ಇದರಿಂದ ಕೋಪಗೊಂಡ ತಂದೆ ಮಂಗಳವಾರ ಬೆಳಗಿನ ಜಾವ ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ.
ಈ ಸುದ್ದಿ ಹತ್ತಿರದಲ್ಲೇ ಇದ್ದ ಗಂಗಾಧರ್ ಮತ್ತು ಅವರ ಕುಟುಂಬಕ್ಕೆ ತಲುಪಿದ್ದು ಯಾವುದೇ ಸಮಸ್ಯೆಯಾಗದಂತೆ ಗಂಗಾಧರ್ ಅಣ್ಣ ಶ್ರೀನಿವಾಸ್ ಆತನನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾಗ ರೈಲ್ವೇ ಹಳಿ ಬಳಿ ಹೋಗುತ್ತಿದ್ದಾಗ ಗಂಗಾಧರ್ ನೀರು ಕುಡಿಯುತ್ತೇನೆ ಎಂದು ಹೇಳಿ ವಾಹನ ನಿಲ್ಲಿಸುವಂತೆ ಕೇಳಿದ್ದಾನೆ. ಈ ವೇಳೆ ಮೈಸೂರು ಚೆನ್ನೈ ಎಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ತಂದೆಯನ್ನ ಪೊಲೀಸರು ಬಂಧಿಸಿದ್ದು, ಕಾಮಸಮುದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ