ಲಕ್ನೋ, ಜೂ 29 (DaijiworldNews/HR): ಆಜಾದ್ ಸಮಾಜ ಪಕ್ಷದ ನಾಯಕ ಮತ್ತು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಬುಧವಾರ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ತಮ್ಮ ಕಾರಿನೊಳಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಶಾಂತಿ ಕಾಪಾಡುವಂತೆ ತಮ್ಮ ಸ್ನೇಹಿತರು ಮತ್ತು ಬೆಂಬಲಿಗರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಂದ್ರಶೇಖರ್ ಆಜಾದ್ ಮನವಿ ಮಾಡಿದ್ದಾರೆ.
ಈ ಕುರಿತು ಆಸ್ಪತ್ರೆಯಿಂದ ಪ್ರತಿಕ್ರಿಯಿಸಿದ ಚಂದ್ರಶೇಖರ್ ಆಜಾದ್, ಈ ರೀತಿಯ ಹಠಾತ್ ದಾಳಿಯನ್ನು ನಾನು ನಿರೀಕ್ಷಿಸಿರಲಿಲ್ಲ. ನನ್ನ ಸ್ನೇಹಿತರು, ಬೆಂಬಲಿಗರು ಮತ್ತು ದೇಶಾದ್ಯಂತದ ಕಾರ್ಯಕರ್ತರು ಶಾಂತಿ ಕಾಪಾಡುವಂತೆ ನಾನು ಮನವಿ ಮಾಡುತ್ತೇನೆ. ನಾವು ನಮ್ಮ ಹೋರಾಟವನ್ನು ಸಾಂವಿಧಾನಿಕವಾಗಿ ಮುಂದುವರಿಸುತ್ತೇವೆ. ಕೋಟ್ಯಂತರ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ ಎಂದರು.
ಚಂದ್ರಶೇಖರ್ ಆಜಾದ್ ಅವರು ಈಗ ಚೇತರಿಸಿಕೊಂಡಿದ್ದು, ಇಂದು ತಪಾಸಣೆ ನಡೆದ ಬಳಿಕ ಡಿಸ್ಚಾರ್ಜ್ ಆಗಲಿದ್ದಾರೆ. ತನಿಖೆ ಮುಂದುವರಿದಿದ್ದು, ಗುಂಡಿನ ದಾಳಿಯ ಹಿಂದಿನ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಇನ್ನು ಚಂದ್ರಶೇಖರ್ ಆಜಾದ್ ಅವರು ಚಲಿಸುತ್ತಿದ್ದ ಕಾರಿನ ಮೇಲೆ ಬುಧವಾರ ಸಹರಾನ್ಪುರ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ದಾಳಿ ನಡೆದಿದ್ದು ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.