ಬೆಂಗಳೂರು, ಜೂ 30 (DaijiworldNews/HR): ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲಿಗೆ ಹಣವನ್ನು ಖಾತೆಗೆ ಜಮೆ ಮಾಡಲು ಇನ್ನು 10-15 ದಿನಗಳ ಕಾಲ ಸಮಯ ಬೇಕಾಗುತ್ತದೆ ಹಾಗಾಗಿ ನಾಳೆಯಿಂದಲೇ ಹಣ ಜಮೆ ಮಾಡಲು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮೊದಲಿಗೆ ಸಮಗ್ರವಾಗಿ ದಾಖಲೆಗಳನ್ನು ಸಂಗ್ರಹಿಸಬೇಕಿದ್ದು, ನಮ್ಮಲ್ಲಿ ಒಟ್ಟು 1.78 ಕೋಟಿ ರೇಷನ್ ಕಾರ್ಡ್ಗಳಿವೆ. ಅವುಗಳಲ್ಲಿ 1.28 ಕೋಟಿ ಬಿಪಿಎಲ್ ಕಾರ್ಡ್ದಾರರು ಇದ್ದಾರೆ. ಈ ಪೈಕಿ 1.22 ಕೋಟಿ ಕಾರ್ಡ್ಗಳಲ್ಲಿ ಕನಿಷ್ಠ ಕುಟುಂಬದ ಒಬ್ಬರಾದರೂ ಬ್ಯಾಂಕ್ ಖಾತೆ ಹೊಂದಿದ್ದಾರೆ. ಇನ್ನುಳಿದ 6 ಲಕ್ಷ ಕಾರ್ಡ್ಗಳಲ್ಲಿ ಸಮಸ್ಯೆಯಾಗಿದೆ ಎಂದರು.
ಇನ್ನು ಕೆಲವರು ಬ್ಯಾಂಕ್ ಖಾತೆ ಹೊಂದಿದ್ದರೆ, ಆಧಾರ್ ಲಿಂಕ್ ಆಗಿಲ್ಲ. ಆಧಾರ್ ಲಿಂಕ್ ಆಗಿದ್ದರೆ ಬ್ಯಾಂಕ್ ಖಾತೆ ಆಕ್ಟೀವ್ ಆಗಿಲ್ಲ. ಈ ರೀತಿಯ ಸಮಸ್ಯೆಗಳು ಕಂಡುಬಂದಿರುವುದರಿಂದ ಜೂನ್ 1ರಿಂದ ಎಲ್ಲರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡೋದು ಕಷ್ಟ ಎಂದಿದ್ದಾರೆ.
ಶೇ.94.6 ಪಡಿತರ ಚೀಟಿಯಲ್ಲಿ ಮಹಿಳೆಯರೇ ಕುಟುಂಬದ ಮುಖ್ಯಸ್ಥರಿದ್ದು, ಶೇ.5 ರಷ್ಟು ಪುರುಷರಿದ್ದಾರೆ. ಒಂದು ವೇಳೆ ಕುಟುಂಬದ ಮುಖ್ಯಸ್ಥರು ಬ್ಯಾಂಕ್ ಖಾತೆ ಹೊಂದಿಲ್ಲವಾದಲ್ಲಿ, ಕುಟುಂಬದ ಇತರ ಸದಸ್ಯರ ಖಾತೆಗೆ ಹಣ ಜಮೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.