ಮುಂಬೈ, ಜು 02 (DaijiworldNews/SM):ಮಹಾರಾಷ್ಟ್ರದಲ್ಲಿ ಭಾನುವಾರ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಉಪ ಮುಖ್ಯಮಂತ್ರಿಯಾಗಿರುವ ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವವನ್ನು ಶ್ಲಾಘಿಸಿದ್ದು, ಪ್ರಧಾನಿ ಮೋದಿ ನಾಯಕತ್ವದಲ್ಲಿ ದೇಶವು ಪ್ರಗತಿ ಹೊಂದುತ್ತಿದೆ, ಅಭಿವೃದ್ಧಿ ಬೆಂಬಲಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಹಾಲಿ ಬಿಜೆಪಿ-ಶಿವಸೇನೆ (ಏಕನಾಥ್ ಶಿಂಧೆ ಬಣ)ಯ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿರುವ ಅಜಿತ್ ಪವಾರ್ ಇಂದು ಸಂಜೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮಾತನಾಡಿದರು. ಈ ವೇಳೆ, 'ರಾಷ್ಟ್ರ ಮಟ್ಟದಲ್ಲಿ ಎಲ್ಲಾ ಅಂಶಗಳನ್ನು ಪರಿಗಣಿಸಿ, ನಾವು ಅಭಿವೃದ್ಧಿಯನ್ನು ಬೆಂಬಲಿಸಬೇಕು ಎಂದು ನಾವು ಭಾವಿಸಿದ್ದೇವೆ. ದೇಶದ ಅಭಿವೃದ್ಧಿಗಾಗಿ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಾಗಿ ಏಕನಾಥ್ ಶಿಂದೆ ನೇತೃತ್ವದ ಸರ್ಕಾರದ ಭಾಗವಾಗಲು ತೀರ್ಮಾನಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಕಾರ್ಯಗಳಿಂದ ದೇಶದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲೂ ಜನಪ್ರಿಯ ಎಂದು ಹೇಳಿದ್ದಾರೆ.
ಇದೇ ವೇಳೆ ಎನ್ಸಿಪಿ ವಿಭಜನೆಗೊಂಡಿದೆ ಎಂಬುದನ್ನು ತಳ್ಳಿಹಾಕಿರುವ ಮುಖಂಡ ಅಜಿತ್ ಪವಾರ್, ಭವಿಷ್ಯದಲ್ಲಿಯೂ ತಾವು ಎನ್ಸಿಪಿ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಅಂತೆಯೇ ಶಿಂದೆ ನೇತೃತ್ವದ ಸರ್ಕಾರದ ಭಾಗವಾಗುವ ನಿಲುವನ್ನು ಪಕ್ಷದ ಎಲ್ಲ ಶಾಸಕರು ಬೆಂಬಲಿಸಿದ್ದಾರೆ. ಬಿಜೆಪಿ ಜೊತೆ ಕೈಜೋಡಿಸಿದ್ದನ್ನು ಸಮರ್ಥಿಸಿಕೊಂಡ ಅವರು, ‘ನಾವು ಶಿವಸೇನೆ ಜೊತೆ ಸೇರಬಹುದಾದರೆ, ಬಿಜೆಪಿ ಜೊತೆಗೂ ಸೇರಬಹುದು’ ಎಂದಿದ್ದಾರೆ.
ನಾಗಾಲ್ಯಾಂಡ್ನಲ್ಲಿಯೂ ಇಂತಹುದೇ ಬೆಳವಣಿಗೆ ಆಗಿದೆ. ಒಟ್ಟಾಗಿ ಸಮಗ್ರ ಅಭಿವೃದ್ಧಿಯನ್ನು ಪರಿಗಣಿಸಲಾಗಿದೆ. ಖಾತೆಗಳ ಹಂಚಿಕೆ ಕೆಲವೇ ದಿನದಲ್ಲಿ ನಡೆಯಲಿದ್ದು, ಅದರ ಹಿಂದೆಯೇ ಕಾರ್ಯತತ್ಪರವಾಗುತ್ತೇವೆ ಎಂದು ಹೇಳಿದರು.