ಬೆಂಗಳೂರು, ಜು 5 (DaijiworldNews/MS): 16ನೇ ವಿಧಾನಸಭೆಯ ಮೊದಲ ಅಧಿವೇಶನ 3ನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿಯಿಂದ ವಿಪಕ್ಷ ನಾಯಕನ ಹೆಸರು ಮಾತ್ರ ಇನ್ನೂ ಘೋಷಣೆ ಆಗಿಲ್ಲ. 30 ವರ್ಷದ ಇತಿಹಾಸದಲ್ಲೇ ಇದೇ ಮೊದಲು ವಿಪಕ್ಷ ನಾಯಕನ ಸೀಟ್ ಖಾಲಿ ಉಳಿಸಿ ಕಲಾಪ ನಡೆಯುತ್ತಿದೆ.
ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕ ಯಾರು ಎಂಬ ಪ್ರಶ್ನೆ ಭಾರೀ ಕುತೂಹಲ ಕೆರಳಿಸಿದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಸನಗೌಡ ಪಾಟೀಲ್ ಯತ್ನಾಳ್ , ಅರಗ ಜ್ಞಾನೇಂದ್ರ, ಸುರೇಶ್ ಕುಮಾರ್, ಆರ್. ಅಶೋಕ್, ಅರವಿಂದ ಬೆಲ್ಲದ್ ಹೆಸರು ಮುಂಚೂಣಿಯಲ್ಲಿದ್ದು ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ವಿಧಾನಸಭೆ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರ ಆಯ್ಕೆ ಸಂಬಂಧ ಹೈಕಮಾಂಡ್ ಅಭಿಪ್ರಾಯ ಸಂಗ್ರಹಣೆ ಮುಗಿದಿದಿದ್ದು ವೀಕ್ಷಕರು ನೀಡಿದ ವರದಿಯೂ ಹೈಕಮಾಂಡ್ ಗೆ ತಲುಪಿದೆ. ಹೀಗಾಗಿ ಇಂದು ಯಾವುದೇ ಕ್ಷಣದಲ್ಲಾದರೂ ವಿಪಕ್ಷ ನಾಯಕರ ಹೆಸರು ಘೋಷಣೆಯಾಗುವ ನಿರೀಕ್ಷೆ ಇದೆ.
ಒಟ್ಟಾರೆ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆ ಹೈಕಮಾಂಡ್ ಅಂಗಳದಲ್ಲಿದ್ದು, ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.