ಭೂಪಾಲ್, ಜು 5 (DaijiworldNews/Ak): ಆದಿವಾಸಿ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಮಾಡುವ ಮೂಲಕ ವಿಕೃತಿ ಮೆರೆದಿದ್ದ, ಬಿಜೆಪಿ ಶಾಸಕ ಕೇದಾರ್ ಶುಕ್ಲಾ ಆಪ್ತ ಆರೋಪಿ ಪ್ರವೇಶ್ ಶುಕ್ಲಾನನ್ನು ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ.
ಮಧ್ಯಪ್ರದೇಶ ರಾಜ್ಯದಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿತ್ತು. ಸಿಗರೇಟ್ ಸೇದುತ್ತ, ಆದಿವಾಸಿ ವ್ಯಕ್ತಿ ಮೇಲೆ ಪ್ರವೇಶ್ ಶುಕ್ಲಾ ಮೂತ್ರ ವಿಸರ್ಜನೆ ಮಾಡಿದ ವಿಡಿಯೊ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ವಿಡಿಯೋ ವೈರಲ್ ಆದ ಬಳಿಕ ಮಂಗಳವಾರ ಸಿಧಿ ಜಿಲ್ಲೆಯಲ್ಲಿ ಆರೋಪಿಗಳ ವಿರುದ್ಧ ದೌರ್ಜನ್ಯ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಪ್ರವೇಶ್ ಶುಕ್ಲಾ ಪೋಲಿಸರು ಮಧ್ಯರಾತ್ರಿ ಬಂಧಿಸಿದ್ದಾರೆ. ಈ ಘಟನೆ ಕುರಿತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯಿಸಿ , 'ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದರು. ಆರೋಪಿ ಬಿಜೆಪಿಯವನೇ ಅಗಲಿ ಯಾರೇ ಅಗಲಿ , 'ಅಪರಾಧಿಗಳಿಗೆ ಜಾತಿ, ಧರ್ಮ ಮತ್ತು ಪಕ್ಷವಿಲ್ಲ. ಅಪರಾಧಿ ಒಬ್ಬ ಅಪರಾಧಿ ಮಾತ್ರವಾಗಿದ್ದು, ತಪ್ಪಿತಸ್ಥನನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ' ಎಂದು ಹೇಳಿದರು.
ಈ ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ "ನಕಲಿ" ವೀಡಿಯೊವನ್ನು ಹಂಚಿಕೊಂಡ ವ್ಯಕ್ತಿಯ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಎಂದು ಸಂತ್ರಸ್ತ ತಿಳಿಸಿದ್ದಾರೆ. ಈ ವಿಡಿಯೋವನ್ನು ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ಗ್ರಾಮಸ್ಥರು ಈಗ ತಮಗೆ ಬೆದರಿಕೆ ಕರೆ ಬರುತ್ತಿದೆ ಎಂದು ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಆರೋಪಿ ಪ್ರವೇಶ್ ಶುಕ್ಲಾ ಮತ್ತು ಸಂತ್ರಸ್ತ ದಶ್ಮತ್ ರಾವತ್ ಇಬ್ಬರೂ ಬಹ್ರಿ ಪೊಲೀಸ್ ವ್ಯಾಪ್ತಿಯ ಕುಬ್ರಿ ಗ್ರಾಮದವರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇದೀಗ ಐಪಿಸಿ ಸೆಕ್ಷನ್ಗಳು ಮತ್ತು ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ ಕಾಯ್ದೆ) ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಆರೋಪಿ ಪ್ರವೇಶ್ ಶುಕ್ಲಾ ನ್ನು ಪೋಲಿಸರು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.