ಅಹಮದಾಬಾದ್, ಜು 07 (DaijiworldNews/HR): ಮೋದಿ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂದು ಹೇಳಿ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ್ದ ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ ಎಂದು ವರದಿಯಾಗಿದೆ.
ಮೋದಿ ಉಪನಾಮ ಹೊಂದಿರುವವರೆಲ್ಲಾ ಕಳ್ಳರು ಎಂದು 2019ರಲ್ಲಿ ಕೋಲಾರದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದರು.
ಇನ್ನು ಈ ಪ್ರಕರಣ ಸಂಬಂಧ ಗುಜರಾತ್ನಲ್ಲಿ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಾಗಿದ್ದು, ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ರಾಹುಲ್ ಗಾಂಧಿಯವರಿಗೆ 2 ವರ್ಷಗಳ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ರಾಹುಲ್ ಗಾಂಧಿಯವರು ಗುಜರಾತ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಈ ಕುರಿತಾಗಿ ಇಂದು ಗುಜರಾತ್ ಹೈಕೋರ್ಟ್ ತೀರ್ಪು ಪ್ರಕಟಿಸಿದ್ದು, ಕೆಳ ನ್ಯಾಯಾಲಯ ನೀಡಿದ ತೀರ್ಪು ಸರಿಯಾಗಿದೆ. ತೀರ್ಪಿನಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದಿದೆ.