ಕೇರಳ, ಜು 07 (DaijiworldNews/AK): ಕಲುಷಿತ ನೀರಿನಲ್ಲಿ ವಾಸಿಸುವ ಸ್ವತಂತ್ರ ಅಮೀಬಾದಿಂದ ಉಂಟಾಗುವ ಅಪರೂಪದ ಮಿದುಳಿನ ಸೋಂಕಿನ ಪ್ರಕರಣವು ಕೇರಳದ ಅಲಪ್ಪುಳದ ಕರಾವಳಿ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ಶುಕ್ರವಾರ ಸರ್ಕಾರದ ಪ್ರಕಟಣೆ ತಿಳಿಸಿದೆ.
ಕೇರಳದ ಸಮೀಪ ಪಾನವಳ್ಳಿಯಲ್ಲಿ, 15 ವರ್ಷದ ಬಾಲಕ ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಎಂಬ ಕಾಯಿಲೆಯಿಂದ ಸೋಂಕಿಗೆ ಒಳಗಾಗಿದ್ದಾನೆ ಎಂದು ಹೇಳಿದೆ. ಆದರೆ ರೋಗಿಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿ ಸರ್ಕಾರದಿಂದ ಇನ್ನೂ ಲಭ್ಯವಾಗಿಲ್ಲ.
2017 ರಲ್ಲಿ ಅಲಪ್ಪುಳ ಪುರಸಭೆ ಪ್ರದೇಶದಲ್ಲಿ ಈ ರೋಗ ವರದಿಯಾಗಿತ್ತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ವತಂತ್ರವಾಗಿ ಬದುಕುವ, ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾಗಳು ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಮಾನವನ ಮೆದುಳಿಗೆ ಸೋಂಕು ತಗುಲುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ರೋಗದ ತೀವ್ರ ಸ್ವರೂಪವನ್ನು ಪರಿಗಣಿಸಿ, ಕಲುಷಿತ ನೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಜನರಿಗೆ ಸೂಚಿಸಿದ್ದಾರೆ. ಜ್ವರ, ತಲೆನೋವು, ವಾಂತಿ ಈ ರೋಗದ ಮುಖ್ಯ ಲಕ್ಷಣಗಳಾಗಿವೆ.