ಬೆಂಗಳೂರು, ಜು 10 (DaijiworldNews/MS): ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ಮರು ತನಿಖೆ ಆರಂಭವಾಗಿರುವ ಬೆನ್ನಲ್ಲೇ ಮಂಗಳೂರು ಕುಕ್ಕರ್ ಸ್ಫೋಟ ಹಾಗೂ ಶಿವಮೊಗ್ಗದಲ್ಲಿ ನಡೆದ ಟ್ರಯಲ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರಿಕ್ ತನ್ನ ಉಗ್ರ ಚಟುವಟಿಕೆಗಳಿಗೆ ‘ಕ್ರಿಪ್ಟೋ ಕರೆನ್ಸಿ’ ಮೂಲಕವೇ ವಿದೇಶಗಳಿಂದ ಲಕ್ಷಾಂತರ ರೂಪಾಯಿ ನೆರವು ಪಡೆದಿರುವ ಆತಂಕಕಾರಿ ವಿಚಾರ ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ.
ಇಲ್ಲಿಯತನಕ ಹವಾಲಾ ದಂಧೆ ಹಾಗೂ ಅನಾಮಿಕರ ಹೆಸರಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ತಲುಪಿಸುತ್ತಿದ್ದ ಭಯೋತ್ಪಾದಕ ಸಂಘಟನೆಗಳು ಇದೀಗ ಪೊಲೀಸರು ಹಾಗೂ ತನಿಖಾ ಸಂಸ್ಥೆಗಳ ಕಣ್ತಪ್ಪಿಸಲು ಡಿಜಿಟಲ್ ಕರೆನ್ಸಿ ಮೂಲಕ ಉಗ್ರ ಚಟುವಟಿಗೆಗಳಿಗೆ ನಗದಿನ ಸಹಾಯ ಮಾಡುತ್ತಿವೆ.
ಫೇಸ್ಬುಕ್, ಟೆಲಿಗ್ರಾಂ ಮುಖೇನ ಬಿಟ್ ಕಾಯಿನ್ ಸಂಗ್ರಹಿಸಿ, ಡಾರ್ಕ್ ನೆಟ್ ಮುಖಾಂತರ ವಿವಿಧ ವ್ಯಾಲೆಟ್ಗಳಿಗೆ ವರ್ಗಾವಣೆ ಮಾಡಿಕೊಂಡಿರುವ ಸಂಗತಿ ತನಿಖೆಯಲ್ಲಿ ಸಾಬೀತಾಗಿದೆ.
ಕುಕ್ಕರ್ ಸ್ಫೋಟ ಹಾಗೂ ಶಿವಮೊಗ್ಗದಲ್ಲಿ ನಡೆದ ಟ್ರಯಲ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದ ಬಂಧಿತ ಶಾರಿಕ್ ಗೆ ಹಾಗೂ ಇತರರಿಗೆ ಐಸಿಸ್ ಹ್ಯಾಂಡ್ಲರ್ಗಳು ಡಾರ್ಕ್ ವೆಬ್ ಮುಖಾಂತರ ಕ್ರಿಪ್ಟೋ ಕರೆನ್ಸಿ ಕಳುಹಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಎನ್ಐಎ ಇತ್ತೀಚೆಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್ಶೀಟ್ನಲ್ಲೂ ಉಲ್ಲೇಖಿಸಿದೆ.