ಹುಬ್ಬಳ್ಳಿ, ಜು 10 (DaijiworldNews/HR): ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಲ್ಲ. ಕೊಲೆ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಜೈನಮುನಿ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅಪರಾಧಿಗಳ ಮೇಲೆ ತಕ್ಷಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಇದೆ. ಇದರಲ್ಲಿ ತಾರತಮ್ಯ ಪ್ರಶ್ನೆ ಇಲ್ಲ. ಘಟನೆ ಆದ ಮೇಲೆ ಅರೆಸ್ಟ್ ಮಾಡಿದ್ದಾರೆ. ವರೂರಲ್ಲಿ ಜೈನ ಮುನಿಗಳು ಉಪವಾಸ ಕೂತಿದ್ದಾರೆ. ಅವರ ಬೇಡಿಕೆ ಕೇಳುತ್ತೇನೆ. ಮುಂದಿನ ದಿನದಲ್ಲಿ ಈ ರೀತಿ ಆಗದಂತೆ ನೋಡಿಕೊಳ್ತೀವಿ ಎಂದರು.
ಇನ್ನು ನಮ್ಮ ಇಲಾಖೆ ಸಮರ್ಥವಾಗಿದೆ. ಅರೆಸ್ಟ್ ಮಾಡಿದ್ದಾರೆ, ತನಿಖೆ ಶುರುವಾಗಿದೆ. ಸಿಬಿಐಗೆ ಕೊಡೋ ಅಗತ್ಯ ಕಾಣಲ್ಲ. ನಮ್ಮ ಇಲಾಖೆಯ ತನಿಖೆ ಮುಗಿದ ಮೇಲೆ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದಿದ್ದಾರೆ.