ಬೆಂಗಳೂರು, ಜು 10 (DaijiworldNews/HR): ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಮಹಾರಾಷ್ಟ್ರ ಮೂಲದ ಸೈಯದ್ ಮಹಮ್ಮದ್ ಅನ್ವರ್(37) ಎಂದು ಗುರುತಿಸಲಾಗಿದೆ.
ಜುಲೈ 4ರಂದು ಬೆಂಗಳೂರಿಗೆ ಬಂದಿದ್ದ ಸೈಯದ್ ಮದರಸಾ ಹೆಸರಿನಲ್ಲಿ ಮಸೀದಿಗಳ ಬಳಿ ಚಂದಾ ಕೇಳುತ್ತಿದ್ದನು. ಆಜಾಂ ಮಸೀದಿ ಬಳಿ ಚಂದಾ ಪಡೆದಿದ್ದ ಸೈಯದ್ ರಾತ್ರಿ ಮಸೀದಿಯಲ್ಲಿ ಮಲಗಲು ಅವಕಾಶ ಕೇಳಿದ್ದಾನೆ. ಆದರೆ ಇದಕ್ಕೆ ಸಿಬ್ಬಂದಿ ಮಸೀದಿಯಲ್ಲಿ ಮಲಗಲು ಅವಕಾಶವಿಲ್ಲ ಎಂದಿದ್ದಾರೆ.
ಇನ್ನು ಇದರಿಂದ ಬೇಸರಗೊಂಡ ಸೈಯದ್ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆಂದು ಹುಸಿ ಕರೆ ಮಾಡಿದ್ದಾನೆ.
ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದಾಗ ಬಾಂಬ್ ಇರಲಿಲ್ಲ. ಹುಸಿ ಬಾಂಬ್ ಕರೆಯಂದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.