ಭೋಪಾಲ,ಜು 12 (DaijiworldNews/AK) ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಆಫ್ರಿಕನ್ ಚಿರತೆ ಮೃತಪಟ್ಟಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ತೇಜಸ್ ಹೆಸರಿನ ಈ ಚಿರತೆ ಮಂಗಳವಾರ ಉದ್ಯಾನವನದಲ್ಲಿ ಮೃತಪಟ್ಟಿದೆ.
ತೇಜಸ್ ಚಿರತೆಯನ್ನು ಮಿಲನಕ್ಕಾಗಿ ನಮೀಬಿಯಾದ ಹೆಣ್ಣು ಚೀತಾದೊಂದಿಗೆ ಉದ್ಯಾನವನದ ಆವರಣದಲ್ಲಿ ಬಿಡಲಾಗಿತ್ತು. ಬೆಳಗ್ಗೆ ಹೊತ್ತು ಸಿಬ್ಬಂದಿಗಳು ನೋಡಿದಾಗ ತೇಜಸ್ 'ಕುತ್ತಿಗೆಯಲ್ಲಿ ಗಾಯವಾಗಿರುವುದು ಕಂಡು ಬಂದಿದೆ. ಸಿಬ್ಬಂದಿಗಳು ಪಶು ಉದ್ಯಾನವನದ ಪಶು ವೈದ್ಯಕೀಯ ತಜ್ಞರಿಗೆ ಮಾಹಿತಿ ನೀಡಿದ್ದಾರೆ. ವೈದ್ಯಕೀಯ ತಜ್ಞರು ಪರಿಶೀಲಿಸಿದಾಗ ಗಾಯವು ಗಂಭೀರ ಸ್ವರೂಪದ್ದಾಗಿದೆ ಎಂಬುವುದು ತಿಳಿದು ಬಂದಿದೆ.
ತಕ್ಷಣ ಗಾಯಗೊಂಡ ಚಿರತೆಗೆ ಚಿಕಿತ್ಸೆ ನೀಡಲು ವೈದ್ಯಕೀಯ ತಂಡವು ಸ್ಥಳಕ್ಕೆ ಆಗಮಿಸಿದಾಗ ಚಿರತೆ ಮೃತಪಟ್ಟಿದೆ ಎಂದು ಹಿರಿಯ ಅರಣ್ಯ ಇಲಾಖೆ ಅಧಿಕಾರಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಹೆಣ್ಣು ಚೀತಾದೊಂದಿಗೆ ದೈಹಿಕ ಘರ್ಷಣೆಯೇ ಸಾವಿಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ.
ಕಳೆದ ಮಾರ್ಚ್ ತಿಂಗಳಿಂದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 4 ಚಿರತೆಗಳು ಸಾವನ್ನಪ್ಪಿದೆ. ಮಾರ್ಚಲ್ಲಿ ನಮೀಬಿಯಾದ ಹೆಣ್ಣು ಚೀತಾಕ್ಕೆ ಜನಿಸಿದ್ದ ನಾಲ್ಕು ಮರಿಗಳಲ್ಲಿ ಮೂರು ಸಾವನ್ನಪ್ಪಿವೆ ಎನ್ನಲಾಗಿದೆ.
ನಮೀಬಿಯಾದಿಂದ ಎಂಟು ಮತ್ತು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದ್ದು ಈಗ ಒಟ್ಟು 16 ವಯಸ್ಕ ಚೀತಾಗಳು ಹಾಗೂ ಒಂದು ಮರಿ ಉಳಿದುಕೊಂಡಿವೆ.