ಬೆಂಗಳೂರು , ಜು 12 (DaijiworldNews/AK) ಕಾಂಗ್ರೇಸ್ ಅಧಿಕಾರಕ್ಕೆ ಬಂದ ಎರಡು ತಿಂಗಳಲ್ಲೇ ರಾಜ್ಯದಲ್ಲಿ ಜಂಗಲ್ ರಾಜ್ಯ ಶುರುವಾಗಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೋಪಿಸಿದರು.
ಇಂದು ಬಿಜೆಪಿ ಕಾರ್ಯಕರ್ತರು ರಾಜ್ಯದ ಕಾನೂನು, ಸುವ್ಯವಸ್ಥೆ ಕುಸಿತದ ವಿರುದ್ಧ ಪ್ರತಿಭಟನೆ ನಡೆಸಿದರು. ಬಳಿಕ ಈ ಕುರಿತು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು .
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಜನರಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ಇದೆ. ಜೈನ ಮುನಿಗಳು, ಸರ್ವಸಂಗ ಪರಿತ್ಯಾಗಿಗಳಿಗೆ ರಕ್ಷಣೆ ಇಲ್ಲದಾಗಿದೆ. ಕೊಲೆಗಳು, ಸುಲಿಗೆಗಳು ಹೆಚ್ಚಾಗಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದರೂ ಸರಕಾರಕ್ಕೆ ಏನೂ ಅನ್ನಿಸುತ್ತಿಲ್ಲ ಎಂದು ಟೀಕಿಸಿದರು.
ನಮ್ಮ ಕಾರ್ಯಕರ್ತರ ಕಗ್ಗೊಲೆಯಾಗಿದೆ. ಪೊಲೀಸ್ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಟೀಕಿಸಿದರು. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿದೆ. ಅಲ್ಲದೆ ನಮ್ಮ ಕಾರ್ಯಕರ್ತರ ಮೇಲೆ ಕೇಸುಗಳನ್ನು ಹಾಕುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಜನಸಾಮಾನ್ಯರ ಕೊಲೆ ಆಗುತ್ತಿದೆ. ನಿನ್ನೆ ಬೆಂಗಳೂರಿನಲ್ಲಿ ಹಾಡಹಗಲೇ ಐಟಿ ಕಂಪನಿಯ ಇಬ್ಬರು ಮುಖ್ಯಸ್ಥರನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆ ವ್ಯಕ್ತಿ ಕೃತ್ಯದ ಕುರಿತು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದಾರೆ. ಕೊಲೆಗಡುಕರ ನಿರ್ಭೀತಿ, ಉದ್ಧಟತನಕ್ಕೆ ಇದು ಸಾಕ್ಷಿಯಂತಿದೆ. ಅವರಿಗೆ ಕಾನೂನು ಸುವ್ಯವಸ್ಥೆ, ಕಾನೂನು, ಪೊಲೀಸರ ಭಯ ಇಲ್ಲದ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜಘಾತುಕ ವ್ಯಕ್ತಿಗಳು ಇವತ್ತು ಕರ್ನಾಟಕದ ಎಲ್ಲೆಡೆ ದೊಂಬಿ, ಗಲಾಟೆ, ಹತ್ಯೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ಕೆಳಹಂತದ ಪೊಲೀಸರು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ನುಡಿದರು. ಪ್ರಾಮಾಣಿಕ ಪೊಲೀಸ್ ಒಬ್ಬರು ಮರಳು ಮಾಫಿಯಾ ತಡೆಯಲು ಹೋದಾಗ ಅವರ ಹತ್ಯೆ ಆಗಿದೆ ಎಂದು ವಿವರಿಸಿದರು.
ಪೊಲೀಸರ ನೈತಿಕತೆ ಕುಸಿಯುವಂತೆ ಮಾಡಿದ್ದಾರೆ.
ಅಲ್ಲದೆ, ಸರಕಾರದ ಕಾನೂನು- ಸುವ್ಯವಸ್ಥೆ ಬಗ್ಗೆ ಪ್ರತಿ ಜಿಲ್ಲೆ, ತಾಲ್ಲೂಕಿನಲ್ಲಿ ಪ್ರತಿಭಟನೆ ಮಾಡಿ ಜನಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ತಿಳಿಸಿದರು.