ನವದೆಹಲಿ, ಜು 13 (DaijiworldNews/MS): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ವಾಸಸ್ಥಳವನ್ನು ದೆಹಲಿ ಮಾಜಿ ಸಿಎಂ ದಿ. ಶೀಲಾ ದೀಕ್ಷಿತ್ ನಿವಾಸಕ್ಕೆ ಬದಲಾಯಿಸುವ ಸಾಧ್ಯತೆ ಇದೆ.
ಲೋಕಸಭೆ ಸಂಸದ ಸ್ಥಾನದಿಂದ ಅನರ್ಹಗೊಂಡ ಕಾರಣಕ್ಕೆ, ರಾಹುಲ್ ಗಾಂಧಿ ವಾಸವಿದ್ದ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿ ರಾಹುಲ್ ಗಾಂಧಿ ಪ್ರಸ್ತುತ ತನ್ನ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ಜನಪಥ್ ನಿವಾಸದಲ್ಲಿ ವಾಸಿಸುತ್ತಿದ್ದಾರೆ.
ಹುಮಾಯೂನ್ ಸಮಾಧಿಯ ಹಿಂದೆ ಇರುವ ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ನ ಹಿರಿಯ ನಾಯಕಿ ದಿವಂಗತ ಶೀಲಾ ದೀಕ್ಷಿತ್ ಅವರ ಕುಟುಂಬಕ್ಕೆ ಸೇರಿದ ಮೂರು ಕೊಠಡಿಗಳ ಮನೆಗೆ ರಾಹುಲ್ ಗಾಂಧಿ ಸ್ಥಳಾಂತರವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಶೀಲಾ ದೀಕ್ಷಿತ್ ಅವರು ತಮ್ಮ ಜೀವನದ ಕೊನೆಯ ವರ್ಷಗಳನ್ನು ಅಲ್ಲಿ ಕಳೆದಿದ್ದರು.
ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರ ಪುತ್ರ ಸಂದೀಪ್ ದೀಕ್ಷಿತ್ ಅವರು ರಾಹುಲ್ ಗಾಂಧಿಗಾಗಿ ತಮ್ಮ ನಿವಾಸವನ್ನು ಖಾಲಿ ಮಾಡಿದ್ದು ರಾಹುಲ್ ಗಾಂಧಿಗೆ ಈ ಮನೆ ಬಾಡಿಗೆಗೆ ನೀಡಲಿದ್ದಾರೆ ಎಂದು ವರದಿಯಾಗಿದೆ.
ರಾಹುಲ್ ಗಾಂಧಿ ಅವರಿಗೆ ಕೇಂದ್ರವು Z+ ಭದ್ರತೆಯನ್ನು ನೀಡಿದ್ದು, ಹೊಸ ಸ್ಥಳದಲ್ಲಿ ವಾಸಕ್ಕೆ ತೆರಳುವ ಮೊದಲು ಅವರು NOC (ನಿರಾಪೇಕ್ಷಣೆ ಪ್ರಮಾಣಪತ್ರ) ಪಡೆಯಬೇಕಾಗುತ್ತದೆ.