ತುಮಕೂರು, ಜು 14 (DaijiworldNews/HR): ತುಮಕೂರು ತಾಲೂಕಿನ ಕುಚ್ಚಂಗಿಯಲ್ಲಿ 8 ವರ್ಷದ ಸಹೋದರಿಯೊಬ್ಬಳು ತನ್ನ ಜೀವದ ಹಂಗು ತೊರೆದು ಸಹೋದರನ ಜೀವ ರಕ್ಷಿಸಿರುವ ಘಟನೆ ನಡೆದಿದೆ.
ಬಾವಿಗೆ ಬಿದ್ದಿದ್ದ ತಮ್ಮ ಹಿಮಾಂಶುನನ್ನು ಸಹೋದರಿ ಶಾಲೂ ರಕ್ಷಿಸಿದ್ದಾಳೆ.
ಉತ್ತರ ಪ್ರದೇಶ ಮೂಲದ ಜೀತೇಂದ್ರ, ರಾಜಕುಮಾರಿ ದಂಪತಿ ಕುಚ್ಚಂಗಿಯಲ್ಲಿನ ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದು, ಹಿಮಾಂಶು ಹಾಗೂ ರಾಶಿ ತೋಟದಲ್ಲಿ ಆಟವಾಡುತ್ತಿದ್ದರು. ಈ ವೇಳೆ ಬಾವಿಗೆ ಬಿದ್ದ ಚೆಂಡು ತೆಗೆಯಲು ಹೋಗಿ ಹಿಮಾಂಶು ಬಾವಿಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದನು. ಇದನ್ನು ಕಂಡು ಶಾಲೂ ಲೈಫ್ ಜಾಕೀಟ್ ಧರಿಸಿ ಬಾವಿಗೆ ಜಿಗಿದಿದ್ದಾಳೆ.
ಇನ್ನು ಇದೇ ವೇಳೆ ಶಾಲೂ ಸಹಾಯಕ್ಕೆ ಅಕ್ಕಪಕ್ಕದ ಜನರು ಆಗಮಿಸಿದ್ದು, ಬಳಿಕ ಸ್ಥಳೀಯರು ಬಾವಿಯಿಂದ ಇಬ್ಬರನ್ನು ಮೇಲಕ್ಕೆ ಎತ್ತಿದ್ದಾರೆ.
ಶಾಲೂ ಮನೆ ಮಾಲೀಕ ಧನಂಜಯ್ಯ ಬಳಿ ಈಜು ಕಲಿಯುತ್ತಿದ್ದು, ಬಾಲಕಿಯ ಸಾಹಸವನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.