ಬೆಂಗಳೂರು, ಜು 15 (DaijiworldNews/MS): ರಾಜ್ಯದಲ್ಲಿ ಮಹಿಳೆಯರ ಖಾತೆಗೆ ಸರ್ಕಾರ ಪ್ರತಿ ತಿಂಗಳು 2000 ರೂ. ಜಮೆ ಮಾಡುವ ಬಹು ನಿರೀಕ್ಷಿತ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಸರ್ಕಾರ ಇಂದು ಘೋಷಣೆ ಮಾಡುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರು ಗೃಹಲಕ್ಷ್ಮಿ ಯೋಜನೆ ಪ್ರಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಹೀಗಾಗಿ, ಜು.16, 17 ಅಥವಾ 18ರಂದು ಚಾಲನೆ ನೀಡಲು ಸಮ್ಮತಿಸಿದ್ದು, ಇಂದು ಈ ಬಗ್ಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.
ಶುಕ್ರವಾರ ಪರಿಷತ್ತಿನಲ್ಲಿ ಎಂಎಲ್ಸಿ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಯೋಜನೆಗೆ ನೋಂದಣಿ ತೆರೆಯಲು ಮೂರು ನಾಲ್ಕು ದಿನದಲ್ಲಿ ಆಪ್ ಬಿಡುಗಡೆ ಮಾಡಲಾಗುವುದು ಮತ್ತು ಸರ್ಕಾರವು ಆಗಸ್ಟ್ 16 ಅಥವಾ 17 ರಂದು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 2,000 ರೂ. ಜಮೆ ಮಾಡಲಿದೆ. 'ಗೃಹ ಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿ ನೀಡಲು ನಾವು ತೆರೆದಿರುವ ಸಹಾಯವಾಣಿಯ ಮೂಲಕ ಹೆಚ್ಚಿನ ಸಂಖ್ಯೆಯ ಕರೆಗಳು ಬರುತ್ತಿದ್ದು, ಜನರು ವಿಚಾರಿಸುತ್ತಿದ್ದಾರೆ' ಎಂದು ಅವರು ಹೇಳಿದರು.