ವಾರಾಣಸಿ, ಜು 15 (DaijiworldNews/AK) ಉತ್ತರ ಪ್ರದೇಶದ ವಾರಾಣಸಿಯ ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಗ್ಯಾನವ್ಯಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಪಟ್ಟಂತೆ ವಾರಾಣಸಿ ಜಿಲ್ಲಾ ಕೋರ್ಟ್ ಜುಲೈ 21ಕ್ಕೆ ತೀರ್ಪು ಪ್ರಕಟಿಸಲಿದೆ.
ಇದೀಗ ಎರಡೂ ಕಡೆಯ ವಾದ -ಪ್ರತಿವಾದ ಆಲಿಸಿರುವ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಪ್ರಕರಣದ ಹಿಂದೂ ಪರ ಅರ್ಜಿದಾರರಿಂದ ಶಿವಲಿಂಗ ಪತ್ತೆ ಸ್ಥಳವಾದ ವಜುಖಾನಾ ಹೊರತುಪಡಿಸಿ ಇಡೀ ಗ್ಯಾನವ್ಯಾಪಿ ಮಸೀದಿ ಸಂಕೀರ್ಣವನ್ನು ಸಮೀಕ್ಷೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು.
ಈ ಕುರಿತಂತೆ ಇಡೀ ಮಸೀದಿ ಸಂಕೀರ್ಣದ ಪುರಾತತ್ವ ಅಧ್ಯಯನದಿಂದ ಮಾತ್ರವೇ ಗ್ಯಾನವ್ಯಾಪಿ ಮತ್ತು ಕಾಶಿ ವಿಶ್ವನಾಥ ದೇಗುಲ ವ್ಯಾಜ್ಯ ಬಗೆಹರಿಲು ಸಾಧ್ಯ ಎಂದು ಹಿಂದೂ ಪರ ವಕೀಲರು ವಾದಿಸಿದ್ದರು.
ಈ ಮಧ್ಯೆ ಗ್ಯಾನವ್ಯಾಪಿ ಮಸೀದಿಯಲ್ಲಿರುವ ಹಿಂದೂ ದೇವರ ಪೂಜೆಗೆ ಅವಕಾಶ ನೀಡಬೇಕು ಎಂದು ಐವರು ಮಹಿಳೆಯರು ಕೋರ್ಟ್ ಮೆಟ್ಟೇಲೇರಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಯಿತ್ತು. ಇಷ್ಟೇ ಅಲ್ಲ ದೇಶದ ಹಲವು ಮಸೀದಿಗಳು ದೇವಸ್ಥಾನದ ಮೇಲೆ ನಿಂತಿದೆ. ಇವುಗಳನ್ನು ಮರಳಿ ನೀಡಬೇಕು ಅನ್ನೋ ಕೂಗು ಜೋರಾಗಿ ಕೇಳಿಬಂದಿದೆ.
ಒಟ್ಟಾರೆ ಜುಲೈ 21 ಕ್ಕೆ ಗ್ಯಾನವ್ಯಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆಯ ಪ್ರಕರಣದ ಕುರಿತು ಕೋರ್ಟ್ ನೀಡುವ ತೀರ್ಪು ಎಲ್ಲರ ಕುತೂಹಲ ಮೂಡಿಸಿದೆ.