ಬೆಂಗಳೂರು, ಜು 17 (DaijiworldNews/MS): ಬಿಜೆಪಿ ನೇತೃತ್ವದ ಎನ್ ಡಿಎಗೆ ಸೆಡ್ಡು ಹೊಡೆಯಲು ವ್ಯೂಹವೊಂದನ್ನು ಮಹಾಘಟ್ ಬಂಧನ್ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ವಿಪಕ್ಷಗಳು ರಚಿಸುತ್ತಿವೆ.ಅದರ ಭಾಗವಾಗಿ ಇಂದು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಸಭೆ ಸೇರುತ್ತಿವೆ.
ಕಳೆದ ಬಾರಿ ಬಿಹಾರ ರಾಜಧಾನಿ ಪಾಟ್ನಾದಲ್ಲಿ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಅದರ ಮುಂದುವರಿದ ಭಾಗ ಎರಡನೇ ಸಭೆ ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ನಲ್ಲಿ ಇಂದು ಮತ್ತು ನಾಳೆ(ಜುಲೈ 17-18ರಂದು) ನಡೆಯುತ್ತಿದೆ. ಒಟ್ಟು 26 ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಸಭೆಯ ಉಸ್ತುವಾರಿಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಹಿಸಿಕೊಂಡಿದ್ದು, ಖಾಸಗಿ ಹೊಟೇಲ್ ನಲ್ಲಿ ನಾಯಕರಿಗೆ ಉಳಿದುಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇಂದು ಸಂಜೆ 6 ಗಂಟೆಗೆ ಅನೌಪಚಾರಿಕ ಸಭೆಯೊಂದು ನಡೆಯಲಿದ್ದು ಅದು ಮುಗಿದ ನಂತರ ಎಲ್ಲಾ ನಾಯಕರಿಗೆ ಸಿಎಂ ಸಿದ್ದರಾಮಯ್ಯ ರಾತ್ರಿ ಔತಣಕೂಟ ಏರ್ಪಡಿಸಿದ್ದಾರೆ. ನಾಳೆ ಜುಲೈ 18ರಂದು ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಸಭೆ ಸಾಯಂಕಾಲ 4 ಗಂಟೆಯವರೆಗೆ ನಡೆಯಲಿದೆ