ಬೆಂಗಳೂರು, ಜು 18 (DaijiworldNews/AK): 2023ರ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವ ಹಾಗೂ ಪ್ರಧಾನಿ ಮೋದಿ, ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸುವ ಉದ್ದೇಶದಿಂದ ಬೆಂಗಳೂರಿನ ಹೋಟೆಲ್ನಲ್ಲಿ ವಿಪಕ್ಷಗಳ ಮೈತ್ರಿಕೂಟದ ಸಭೆ ನಡೆಸಲಾಯಿತು. 26 ಪಕ್ಷಗಳ ಮೈತ್ರಿಕೂಟಕ್ಕೆ ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ (INDIA) ಎಂದು ಹೆಸರಿಡಲಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಸಭೆಗೆ ಬಂದಿರುವುದು ನನಗೆ ಗೌರವ ತಂದಿದೆ. ಭಾರತದ ಕಲ್ಪನೆಯ ಮೇಲೆ ದಾಳಿ ನಡೆಯುತ್ತಿದೆ. ಕೋಟ್ಯಂತರ ಭಾರತೀಯರಿಂದ ಭಾರತದ ಧ್ವನಿಯನ್ನು ಕಿತ್ತುಕೊಂಡು ನರೇಂದ್ರ ಮೋದಿಯವರ ಆಪ್ತರಾಗಿರುವ ಕೆಲವೇ ಉದ್ಯಮಿಗಳಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದರು. ಇದು ಭಾರತದ ಧ್ವನಿಗಾಗಿ ಹೋರಾಟವಾಗಿದೆ. ಅದಕ್ಕಾಗಿಯೇ ನಾವು ಈ ಹೆಸರನ್ನು ಆರಿಸಿದ್ದೇವೆ ಎಂದರು.
ವಿಪಕ್ಷದ ಮುಖಂಡರು ಮಾತನಾಡಿ, ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ ಹೆಸರನ್ನು ಘೋಷಿಸಿದ್ದೇವೆ. ಈ ಬಗ್ಗೆ ಸಭೆಯಲ್ಲಿ 26 ರಾಷ್ಟ್ರೀಯ ವಿಪಕ್ಷಗಳ ಮೈತ್ರಿಕೂಟಕ್ಕೆ ಇಂಡಿಯಾ ಎಂದು ಹೆಸರಿಡುವ ಪ್ರಸ್ತಾಪವನ್ನು ರಾಹುಲ್ ಗಾಂಧಿ ಅವರು ಮುಂದಿಡಲಾಯಿತು ಎಂದರು.
ಸಭೆಯಲ್ಲಿ ಮೈತ್ರಿಕೂಟದ ನಾಯಕತ್ವದ ಬಗ್ಗೆಯೂ ಮಾತುಕತೆ ನಡೆದಿದೆ. ಸೋನಿಯಾ ಗಾಂಧಿ, ಶರತ್ ಪವಾರ್, ನಿತೀಶ್ ಕುಮಾರ್ ಹೆಸರು ಚರ್ಚೆಯಲ್ಲಿ ಇದೆ. ಅಂತಿಮವಾಗಿ ಮೂರ್ನಾಲ್ಕು ಸುತ್ತಿನ ಸಭೆಯ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಇಂದು ಮಹಾಘಟಬಂಧನ ಮೈತ್ರಿಕೂಟದ ಹೆಸರಿನ ಬಗ್ಗೆ ಚರ್ಚೆಯಾಗಿತ್ತು. ಅಲ್ಲದೇ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದರು.
ಒಕ್ಕೂಟದ ಉದ್ದೇಶ ಹಾಗೂ ಗುರಿಗೆ ಸಂಬಂಧಿಸಿ ಸಾಮೂಹಿಕ ಸಂಕಲ್ಪ ಮಾಡಲಾಗಿದೆ. ದ್ವೇಷ ರಾಜಕಾರಣದ ವಿರುದ್ಧ ಸಾಮೂಹಿಕ ಹೋರಾಟಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕ ಉದ್ದಿಮೆಗಳ ಸಂರಕ್ಷಣೆಗೆ ನಿರ್ಣಯಿಸಲಾಗಿದೆ. ಮಣಿಪುರದ ಗಲಭೆ ವಿಚಾರ ಕೂಡ ಸಾಮೂಹಿಕ ಸಂಕಲ್ಪದ ವೇಳೆ ಪ್ರಸ್ತಾಪವಾಗಿದೆ.
ಲೋಕಸಭೆಗೆ ಒಟ್ಟಾಗಿ ಸ್ಪರ್ಧೆ ಮಾಡುವ ನಿರ್ಣಯ ಕೂಡ ಕೈಗೊಳ್ಳಲಾಗಿದೆ. ಸೀಟು ಹಂಚಿಕೆಗೆ ಸಂಬಂಧಿಸಿ ರಾಜ್ಯವಾರು ಸಮಿತಿಗಳ ರಚನೆಗೆ ಚರ್ಚೆ ನಡೆದಿದೆ. ಯಾವ ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಸೀಟು ಹಂಚಿಕೆ ಎಂಬ ನಿರ್ಧಾರ ಮಾಡಲು ಪ್ರತ್ಯೇಕ ಸಮಿತಿ ಮಾಡಲು ತೀರ್ಮಾನಿಸಲಾಗಿದೆ. ರಾಜ್ಯವಾರು ಸಮಿತಿ ಮಾಡಿ ಮುಂದಿನ ದಿನಗಳಲ್ಲಿ ಸೀಟು ಹಂಚಿಕೆ ಸಂಬಂಧ ಚರ್ಚಿಸಲಾಗಿದೆ. ಸಾಮೂಹಿಕ ಸಂಕಲ್ಪಕ್ಕೆ ಸಮ್ಮತಿ ಸೂಚಿಸಿ 26 ಪಕ್ಷಗಳ ನಾಯಕರು ಸಹಿ ಹಾಕಿದ್ದಾರೆ ಎಂದರು.