ಬೆಂಗಳೂರು, ಜು 19 (DaijiworldNews/MS): ವಿಧಾನಸಭಾ ಕಲಾಪದ ವೇಳೆ ಅಶಿಸ್ತಿನಿಂದ ವರ್ತಿಸಿ, ಸ್ಪೀಕರ್ ಪೀಠ ಮತ್ತು ಸದನಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿಯ ಹತ್ತು ಮಂದಿ ಶಾಸಕರನ್ನು ಈ ವಿಧಾನಸಭಾ ಅಧಿವೇಶನ ಮುಗಿಯುವವರೆಗೆ (ಜುಲೈ 21)ಸ್ಪೀಕರ್ ಯು.ಟಿ.ಖಾದರ್ ಅವರು ಅಮಾನತು ಮಾಡಿದ್ದಾರೆ.
ಆರ್.ಅಶೋಕ್, ಆರಗ ಜ್ಞಾನೇಂದ್ರ, ವಿ.ಸುನಿಲ್ ಕುಮಾರ್, ಅರವಿಂದ ಬೆಲ್ಲದ್, ಧೀರಜ್ ಮುನಿರಾಜು, ಭರತ್ ಶೆಟ್ಟಿ, ಡಾ. ಅಶ್ವತ್ಥ ನಾರಾಯಣ, ಉಮಾನಾಥ ಕೋಟ್ಯಾನ್, ಯಶ್ ಪಾಲ್ ಸುವರ್ಣ,ವೇದವ್ಯಾಸ ಕಾಮತ್ ಅಮಾನತಾಗಿರುವ ಬಿಜೆಪಿ ಶಾಸಕರಾಗಿದ್ದಾರೆ.
ಸದನದ ಬಾವಿಗಿಳಿದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಬಿಜೆಪಿ ಶಾಸಕರು ಬಜೆಟ್ ಪ್ರತಿಗಳ ಕಾಗದಗಳನ್ನು ಹರಿದು ಚೂರು ಮಾಡಿ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರ ಮೇಲೆ ಎಸೆದಿದ್ದರು. ಈ ವಿಚಾರವಾಗಿ ಸದನದಲ್ಲಿ ಭಾರಿ ಗದ್ದಲ ಸೃಷ್ಟಿಯಾಗಿತ್ತು. ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ಸ್ಪೀಕರ್ಗೆ ದೂರು ನೀಡಿದ್ದರು.