ಬೆಂಗಳೂರು, ಜು 20 (DaijiworldNews/SM): ವಿಧಾನಸಭೆಯಲ್ಲಿ ನಡೆದ ಗದ್ದಲ, ಬಿಜೆಪಿ ಶಾಸಕರ ನಡವಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಶಾಸಕರು, ಉಪಸಭಾಧ್ಯಕ್ಷರಾಗಿ ಕಲಾಪ ನಡೆಸುತ್ತಿದ್ದ ರುದ್ರಪ್ಪ ಲಮಾಣಿ ಅವರತ್ತ ಪೇಪರ್ ಎಸೆದು, ಮಸೂದೆ ಪ್ರತಿಗಳನ್ನು ಹರಿದು ಹಾಕಿದ್ದನ್ನು ಸಿಎಂ ಸಿದ್ದರಾಮಯ್ಯ ಅನಾಗರಿಕ ವರ್ತನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕರು, ಮಾಜಿ ಸಚಿವ ನಡವಳಿಕೆಯ ಕಾರಣದಿಂದಾಗಿ 10 ಶಾಸಕರನ್ನು ಸದನದ ಮುಂದಿನ ಅವಧಿವರೆಗೂ ಅಮಾನತುಗೊಳಿಸಲಾಗಿದೆ. ಸರ್ಕಾರದ ನಡೆಯನ್ನು ಖಂಡಿಸಿರುವ ಜೆಡಿಎಸ್ ಹಾಗೂ ಬಿಜೆಪಿ ಇಂದು ಸದನದ ಕಲಾಪವನ್ನು ಬಹಿಷ್ಕರಿಸಿದ್ದವು.
ಈ ವಿಚಾರವಾಗಿ ಸದನದಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಬಿಜೆಪಿಯ ಶಾಸಕರು ಅನಾಗರಿಕ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಹೇಳಿದ್ದು ಬಿಜೆಪಿಯನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಆರೋಪಿಸಿದ್ದಾರೆ. ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಹಾಗೂ ಸಂಸದೀಯ ವ್ಯವಸ್ಥೆ ವಿರೋಧಿ ಎಂದು ಹೇಳಿದ್ದಾರೆ.
ಇದಷ್ಟೇ ಅಲ್ಲದೇ ಅವರು ಸಭಾಧ್ಯಕ್ಷರು, ಉಪಸಭಾಧ್ಯಕ್ಷರ ಹುದ್ದೆಗೆ ಗೌರವ ಹೊಂದಿಲ್ಲ ಎಂದು ಬಜೆಟ್ ಮೇಲಿನ ಚರ್ಚೆಗೆ ಪ್ರತಿಕ್ರಿಯೆ ನೀಡುವಾಗ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಿನ್ನೆಯ ಬಿಜೆಪಿ ಶಾಸಕರ ನಡವಳಿಕೆಯನ್ನು ನಾನು ಏನೆಂದು ಕರೆಯಬೇಕು? ಅಸಭ್ಯ ಎನ್ನುವ ಶಬ್ದವೂ ಅವರ ನಡವಳಿಕೆಯನ್ನು ಸೂಚಿಸಲು ಸಭ್ಯವಾದ ಶಬ್ದವಾಗುತ್ತದೆ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ.