ನವದೆಹಲಿ, ಜು 21 (DaijiworldNews/MS): ಮೋದಿ ಉಪನಾಮ ಹೊಂದಿರುವವರೆಲ್ಲಾ ಕಳ್ಳರೇ ಎಂಬ ಹೇಳಿಕೆಯ ಮಾನಹಾನಿ ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕೈಗೆತ್ತಿಕೊಂಡಿದ್ದು, ಈ ಕುರಿತು ಪ್ರಕಿಯೆ ನೀಡುವಂತೆ ಗುಜರಾತ್ ಸರ್ಕಾರ ಹಾಗೂ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿಗೆ ನೋಟೀಸ್ ನೀಡಿದೆ.
ಸೂರತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ತನಗೆ ಶಿಕ್ಷೆಯನ್ನು ತಡೆಯಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಅರ್ಜಿ ಸಲ್ಲಿಸಿದ್ದರು. ರಾಹುಲ್ ಪರ ಹಿರಿಯ ವಕೀಲ ಮನು ಸಿಂಘ್ವಿ ಹಾಗೂ ದೂರುದಾರರ ಪರ ಮಹೇಶ್ ಜೇಠ್ಮಲಾನಿ ವಾದ ಮಂಡಿಸಿದರು. ವಾದ -ಪ್ರತಿವಾದ ಆಲಿಸಿದ ನ್ಯಾಯಪೀಠ ಗುಜರಾತ್ ಸರ್ಕಾರ ಮತ್ತು ದೂರುದಾರರಿಗೆ ನೋಟಿಸ್ ಜಾರಿ ಮಾಡಿದೆ. ಹಾಗೆಯೇ ಆ. ೪ ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ.
2019ರ ಏಪ್ರಿಲ್ 13 ರಂದು ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಾ ರಾಹುಲ್, ಎಲ್ಲಾ ಕಳ್ಳರು ಮೋದಿಯನ್ನು ಸಾಮಾನ್ಯ ಉಪನಾಮವಾಗಿ ಹೇಗೆ ಹೊಂದಿದ್ದಾರೆ ಎಂಬ ಹೇಳಿದ್ದರು. ಈ ಹೇಳಿಕೆಯ ವಿರುದ್ಧ 2019 ರಲ್ಲಿ, ಬಿಜೆಪಿ ನಾಯಕ ಪೂರ್ಣೇಶ್ ಮೋದಿ ಸೂರತ್ ನಲ್ಲಿ ಕೇಸು ದಾಖಲು ಮಾಡಿದ್ದರು.