ಬೆಂಗಳೂರು, ಜು 21 (DaijiworldNews/AK):ಮೋದಿ ಅವರು ಪ್ರಧಾನಿ ಆಗುವವರೆಗೂ ದೇಶದ ಸಾಲ 53 ಲಕ್ಷ ಕೋಟಿ ಮಾತ್ರ ಇತ್ತು. ಆದರೆ ಈಗ ದೇಶದ ಸಾಲ 170 ಲಕ್ಷ ಕೋಟಿ ಆಗಿದೆ. ಪ್ರದಾನಿ ಮೋದಿ ಒಬ್ಬರ ಅವಧಿಯಲ್ಲಿ 118 ಲಕ್ಷ ಕೋಟಿ ಸಾಲ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ ಸಾಲದ ಪ್ರಮಾಣದ ಕುರಿತು ಟೀಕಿಸಿದ್ದಾರೆ.
ಅವರು ವಿಧಾನ ಪರಿಷತ್ ನಲ್ಲಿ 2023-24ನೇ ಆಯವ್ಯಯದ ಮೇಲೆ ನಡೆದ ಚರ್ಚೆಗೆ ಉತ್ತರಿಸಿ, ಶ್ರೀಮಂತ ಕಾರ್ಪೋರೇಟ್ ಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಮೋದಿ ಅವರು ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹೇಳುತ್ತಾರೆ ಎಂದರು.
ಕಚ್ಚಾತೈಲದ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್-ಡೀಸೆಲ್ ಬೆಲೆ ಈ ಮಟ್ಟಕ್ಕೆ ಏರಿಸಿದರೆ, ಹಾಲು-ಮೊಸರು-ಮಜ್ಜಿಗೆ- ಮಂಡಕ್ಕಿ ಮೇಲೂ ಜಿಎಸ್ ಟಿ ಹಾಕಿದರೆ ಬಡವರು, ಮಧ್ಯಮವರ್ಗದವರ ಗತಿ ಏನು ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳು ಉತ್ತರ ನೀಡುವಾಗ ಎದುರು ಸಾಲಿನಲ್ಲಿ ಜೆಡಿಎಸ್ ನ ಮರಿತಿಬ್ಬೇಗೌಡ ಮತ್ತು ಬಿಜೆಪಿಯ ಹೆಚ್.ವಿಶ್ವನಾಥ್ ಮಾತ್ರ ಕುಳಿತು ಉಳಿದವರೆಲ್ಲಾ ಬಹಿಷ್ಕರಿಸಿದ್ದರು. ಇದನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು,ಮರಿತಿಬ್ಬೇಗೌಡರು ಟೆಕ್ನಿಕಲಿ ಜೆಡಿಎಸ್ ನಲ್ಲಿದ್ದಾರೆ ಆದರೆ ವಾಸ್ತವವಾಗಿ ಅವರೂ ವಿರುದ್ಧ ಇದ್ದಾರೆ. ಹೆಚ್.ವಿಶ್ವನಾಥ್ ಕೂಡ ಟೆಕ್ನಿಕಲಿ ಬಿಜೆಪಿಯಲ್ಲಿದ್ದಾರೆ. ಆದರೆ ವಾಸ್ತವವಾಗಿ ಬಿಜೆಪಿಗೆ ವಿರುದ್ಧ ಇದ್ದಾರೆ ಎಂದು ಲೇವಡಿ ಮಾಡಿದರು.
ಬಸವಣ್ಣನವರ ದಾಸೋಹ ಮತ್ತು ಕಾಯಕ ಸಂಸ್ಕೃತಿಯ ಆಶಯ ನಮ್ಮ ಆಯವ್ಯಯದಲ್ಲಿದೆ. ಬಿಜೆಪಿಯವರು ಬಸವ ವಿರೋಧಿಗಳು. ಬೆಂಕಿ ಹಚ್ಚುವುದೇ ಬಿಜೆಪಿ ಕೆಲಸ. ಅವರು ಮಣಿಪುರವನ್ಮೂ ಬಿಡಲ್ಲ, ಕರ್ನಾಟಕವನ್ನೂ ಬಿಡಲ್ಲ. ಬೆಂಕಿ ಹಚ್ಚುತ್ತಾರೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶ್ರಮಿಕರ,ಬಡವರ ಹಣ ಕಿತ್ತು ಶ್ರೀಮಂತ ಕಾರ್ಪೋರೇಟ್ ಗಳಿಗೆ ಕೊಡುವುದು ಬಿಜೆಪಿಯ ಆರ್ಥಿಕತೆ. ಈ ಕಾರಣಕ್ಕೇ ಹಾಲು, ಮೊಸರು, ಮಂಡಕ್ಕಿ ಮೇಲೂ ತೆರಿಗೆ ಹಾಕಿದ್ದಾರೆ. ಶ್ರೀಮಂತ ಕಾರ್ಪೋರೇಟ್ ಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದಾರೆ. ಆದರೆ, ರೈತರ ಸಾಲ ಮನ್ನಾ ಮಾಡಿ ಎಂದರೆ ಒಪ್ಪುತ್ತಿಲ್ಲ ಎಂದು ಟೀಕಿಸಿದರು.