ಬಾಗಲಕೋಟೆ, ಜು 22 (DaijiworldNews/HR): ಕರ್ನಾಟಕದ ಸಾರಿಗೆ ಸಂಸ್ಥೆಗಳ ಬಸ್ ನಲ್ಲಿ ಈ ವರೆಗೆ ಮಹಿಳೆಯರು, ವಿಕಲಚೇತನರಿಗೆ ಸ್ಥಾನ ಮೀಸಲಿಡುವ ಪದ್ಧತಿ ಇತ್ತು. ಆದರೆ ಕಾಂಗ್ರೆಸ್ ಸರ್ಕಾರದಿಂದ ಮಹಿಳೆಯರಿಗೆ ಉಚಿತ ಪ್ರಯಾಣದ ಗ್ಯಾರಂಟಿ ನೀಡಿದ ಬಳಿಕ ಇದೀಗ ಬಸ್ ಗಳಲ್ಲಿ ಪುರುಷರಿಗೆ ಸೀಟು ಮೀಸಲಿಡಬೇಕು ಎಂದು ಬಿಜೆಪಿಯ ಮಾಜಿ ಸಚಿವ ಮುರುಗೇಶ ನಿರಾಣಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣದ ಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ ಪ್ರಯಾಣದ ವೇಳೆ ಹಣ ನೀಡಿ ಟಿಕೆಟ್ ಪಡೆಯುವ ಪುರುಷರಿಗೆ ಸೀಟು ಸಿಗುತ್ತಿಲ್ಲ ಎಂದರು.
ಇನ್ನು ನಿತ್ಯವೂ ವಿವಿಧ ಉದ್ಯೋಗಕ್ಕಾಗಿ ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸುವ ಪುರುಷರು ಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಬಸ್ ನಲ್ಲಿ ಜಾಗವಿಲ್ಲದೇ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜಿಗೆ ಹೋಗಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.