ಹಾಸನ, ಎ04(SS): ಅಡ್ವಾಣಿಗೆ ಮೋದಿ ತುಂಬಾ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇಗೌಡ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಅಡ್ವಾಣಿ ಈ ಬಾರಿ ಚುನಾವಣಾ ಕಣದಲ್ಲಿ ಇಲ್ಲ, ಅವರಿಗೆ ಮೋದಿ ತುಂಬಾ ಮಾನಸಿಕ ಹಿಂಸೆಯನ್ನು ನೀಡಿದ್ದಾರೆ. ಬಿಜೆಪಿ ಇಂದು ರಾಷ್ಟ್ರೀಯ ಪಕ್ಷವಾಗಿ, ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಇದರ ಹಿಂದಿನ ಪರಿಶ್ರಮ, ಅದರ ಹಿಂದಿನ ಶಕ್ತಿಯ ಬಗ್ಗೆ ಪ್ರಧಾನಿ ಮೋದಿಗೆ ತಿಳಿದಿದೆಯೇ ಎಂದು ಪ್ರಶ್ನೆ ಮಾಡಿದ್ದಾರೆ,
ಪ್ರಸಕ್ತ ರಾಜಕೀಯದಲ್ಲಿ ನರೇಂದ್ರ ಮೋದಿ ವಿರುದ್ದದ ಹೋರಾಟ ಸುಲಭದ ಮಾತಲ್ಲ. ಮೋದಿಯವರು ಬಿಜೆಪಿಯನ್ನು ಈ ಮಟ್ಟಿಗೆ ಬೆಳೆಸಿದ ಅಡ್ವಾಣಿಯವರಿಗೆ ಇನ್ನಿಲ್ಲದ ಮಾನಸಿಕ ಹಿಂಸೆಯನ್ನು ಮೋದಿ ನೀಡಿದ್ದಾರೆ, ಅವರನ್ನು ರಾಷ್ಟ್ರಪತಿ ಮಾಡಲು ಆಗುತ್ತಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡ ನನ್ನದು ಕುಟುಂಬ ರಾಜಕಾರಣ ಎಂದು ಬಿಜೆಪಿಯವರು ಲೇವಡಿ ಮಾಡುತ್ತಿದ್ದಾರೆ. ದೇಶದಲ್ಲಿ ಎಲ್ಲೂ ಇಲ್ಲದ ರಾಜಕಾರಣ ದೇವೇಗೌಡ್ರ ಕುಟುಂಬದಲ್ಲಿ ನಡೆಯುತ್ತಿದೆಯಾ..? ಮೊದಲು ಬಿಜೆಪಿಯವರು ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕಿವಿಮಾತು ಹೇಳಿದ್ದಾರೆ.
ಬಿಜೆಪಿಯಲ್ಲಿ ಹಿರಿಯರಿಗೆ ಬೆಲೆಯಿಲ್ಲ, ಅಡ್ವಾಣಿ ಜೊತೆ ಮುರಳಿ ಮನೋಹರ್ ಜೋಷಿ ಕೂಡಾ ಈ ಬಾರಿ ಸ್ಪರ್ಧಿಸುತ್ತಿಲ್ಲ. ಈ ಬಾರಿ ರಾಜ್ಯದಲ್ಲಿ ಬಿಜೆಪಿಯನ್ನು ಎರಡಂಕಿ ದಾಟದಂತೆ ಹಿಡಿದಿಡಬೇಕು ಎನ್ನುವ ಗುರಿಯನ್ನು ಹಾಕಿಕೊಂಡಿದ್ದೇವೆ. ಪ್ರಯತ್ನ ನಮ್ಮದು, ದೈವೇಚ್ಚೆ ಏನಿದೆಯೋ ಅದು ಆಗಲಿ ಎಂದು ಹೇಳಿದ್ದಾರೆ.
ಪ್ರಧಾನಿಯಾಗಿ ನಾನು ಮಾಡಿರುವ ಕೆಲಸ ಯಾವುದೂ ನಿಮಗೆ ಲೆಕ್ಕಕ್ಕಿಲ್ಲ. ನಾನು ಈ ಚುನಾವಣೆ ಮುಗಿಯುವವರೆಗೆ ಏನನ್ನೂ ಮಾತನಾಡುವುದಿಲ್ಲ, ದೇಶದ ಪ್ರಧಾನಿಯಾಗಿ ನಾನು ಮಾಡಿರುವ ಕೆಲಸ ಯಾವುದೂ ನಿಮಗೆ ಲೆಕ್ಕಕ್ಕಿಲ್ಲ, ಒಂದು ಸಣ್ಣ ಡಿಬೇಟ್ ಆಗಿದ್ದನ್ನೂ, ನನ್ನ ಅರವತ್ತು ವರ್ಷದ ರಾಜಕಾರಣದಲ್ಲಿ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮಗೆಲ್ಲಾ ಇದು ಪರೀಕ್ಷೆಯ ಸಮಯ. ನಾವೆಲ್ಲಾ ಒಂದಾಗಬೇಕಿದೆ. ನರೇಂದ್ರ ಮೋದಿ ವಿರುದ್ದ ಹೋರಾಡುವುದು ಸುಲಭದ ಮಾತಲ್ಲ ಎನ್ನುವುದನ್ನು ನಾನೂ ಬಲ್ಲೆ ಎಂದು ಗೌಡ್ರು ಹೇಳಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಅನುಮತಿಯನ್ನು ಪಡೆದಿದ್ದೇನೆ. ನನಗೆ ವಯಸ್ಸಾಗಿದ್ದರೂ ಹೋರಾಡುತ್ತಿದ್ದೇನೆ. ಮೋದಿ ಎಷ್ಟೇ ರಾಜ್ಯದಲ್ಲಿ ಪ್ರವಾಸ ಮಾಡಲಿ, ನಾನೂ ರಾಜ್ಯಾದ್ಯಂತ ತಿರುಗಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.