ನವದೆಹಲಿ, ಜು 24(DaijiworldNews/SM): ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಪಕ್ಷಗಳ ಮೈತ್ರಿಕೂಟ ಐಎನ್ ಡಿಎಐ(ಇಂಡಿಯಾ) ಸಂಸತ್ತಿನ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಲು ಸೋಮವಾರ ನಿರ್ಧರಿಸಿದೆ.
ಇಂದು ಬೆಳಗ್ಗೆ ಕಲಾಪ ಆರಂಭಕ್ಕೂ ಮುನ್ನವೇ ಸಂಸತ್ತಿನ ಗಾಂಧಿ ಪ್ರತಿಮೆಯ ಬಳಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಅವರ ನೇತೃತ್ವದಲ್ಲಿ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದು, ಇಂಡಿಯಾ ಮೈತ್ರಿಕೂಟದ ನಾಯಕರು ಅಹೋರಾತ್ರಿ ಧರಣಿ ನಡೆಸಲಿದ್ದಾರೆ ಎಂದು ಹಿರಿಯ ಮುಖಂಡರು ತಿಳಿಸಿದ್ದಾರೆ. ಅಲ್ಲದೆ ಮಂಗಳವಾರವೂ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ 20 ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಿದ ನಂತರ ಪ್ರತಿಪಕ್ಷಗಳು ಸಂಸತ್ತಿನ ಸಂಕೀರ್ಣದೊಳಗೆ 50 ಗಂಟೆಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ್ದವು.