ಬೆಂಗಳೂರು, ಜು 26 (DaijiworldNews/AK): ಶಾಸಕ ತನ್ವೀರ್ ಸೇಠ್ರವರ ವಿನಂತಿ ಪತ್ರದ ಮೇರೆಗೆ ಗಲಭೆಕೋರರ ಕೇಸುಗಳನ್ನು ರಾಜ್ಯ ಸರಕಾರ ಹಿಂದಕ್ಕೆ ಪಡೆದು ಅವರನ್ನು ಬಿಡುಗಡೆ ಮಾಡಿದರೆ ಅದರ ವಿರುದ್ಧ ತೀವ್ರ ರೀತಿಯ ಹೋರಾಟ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.
ರಾಜ್ಯದ ಕಾಂಗ್ರೆಸ್ ಸರಕಾರವು ತುಷ್ಟೀಕರಣ ರಾಜಕಾರಣ, ಮತಬ್ಯಾಂಕ್ ರಾಜಕೀಯ ಮಾಡುತ್ತಿದೆ. ಇನ್ನೊಂದೆಡೆ ಕೆ.ಜೆ.ಹಳ್ಳಿ- ಡಿ.ಜೆ.ಹಳ್ಳಿ ಘಟನೆಯಡಿ ಮಾರಣಾಂತಿಕ ಹಲ್ಲೆ, ದಲಿತ ಶಾಸಕನ ಮನೆ ಸುಟ್ಟು ಹಾಕಿದ್ದು, ಬಂಧನಕ್ಕೆ ಒಳಗಾದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ರೌಡಿಗಳನ್ನು, ಪುಡಿ ರೌಡಿಗಳನ್ನು ಬಿಡುಗಡೆ ಮಾಡಲು ಮತ್ತು ಕೇಸು ರದ್ದತಿಗೆ ತನ್ವೀರ್ ಸೇಠ್ ಅವರು ಗೃಹ ಸಚಿವ ಪರಮೇಶ್ವರರಿಗೆ ವಿನಂತಿ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಹರ್ಷ ಹತ್ಯೆ ಕೇಸನ್ನೂ ರದ್ದು ಮಾಡಿ ಬಂಧಿತರನ್ನು ಬಿಡುಗಡೆ ಮಾಡಲು ಕೋರಿದ್ದಾರೆ. ಇದನ್ನು ಸರಕಾರವು ಮನ್ನಿಸಬಾರದು ಎಂದು ಆಗ್ರಹಿಸಿದ್ದಾರೆ.
ಬಿಜೆಪಿ ಸರಕಾರವು ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಘಟನೆಯ ತನಿಖೆಯನ್ನು ಎನ್ಐಎಗೆ ವಹಿಸಿದೆ. ನ್ಯಾಯಾಲಯದಲ್ಲಿರುವ ಈ ಕೇಸನ್ನು ರದ್ದು ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಉಡುಪಿಯ ಕಾಲೇಜಿನಲ್ಲಿ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಘಟನೆಯ ಕುರಿತು ಪ್ರತಿಕ್ರಿಯಿಸಿ, ಆರೋಪಿಗಳನ್ನು ಕೂಡಲೇ ಬಂಧಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.