ಬೆಂಗಳೂರು, ಜು 28 (DaijiworldNews/AK: ಕರ್ನಾಟಕದ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಏಕಕಾಲದಲ್ಲಿ ವಿದೇಶ ಪ್ರವಾಸದಲ್ಲಿದ್ದಾರೆ. ಬಿಜೆಪಿ - ಜೆಡಿಎಸ್ ಮೈತ್ರಿ ಚರ್ಚೆಯ ನಡುವೆಯೇ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಯುರೋಪ್ ಪ್ರವಾಸದಲ್ಲಿರುವುದು ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಇತ್ತಿಚೇಗೆ ಡಿ.ಕೆ ಶಿವಕುಮಾರ್ ’ಸರ್ಕಾರ ಬೀಳಿಸಲು ಗೆದ್ದವರು - ಸೋತವರು ಸಿಂಗಾಪುರದಲ್ಲಿ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಇಬ್ಬರು ಮಾಜಿ ಸಿಎಂಗಳು ಯುರೋಪ್ ಪ್ರವಾಸದಲ್ಲಿರುವುದು ಕುತೂಹಲ ಮೂಡಿಸಿದೆ.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಕುಟುಂಬ ಸದಸ್ಯರೊಂದಿಗೆ ಗುರುವಾರ ವಿದೇಶ ಪ್ರವಾಸ ಕೈಗೊಂಡಿದ್ದು, ಆಗಸ್ಟ್ 5ಕ್ಕೆ ವಾಪಸಾಗಲಿದ್ದಾರೆ. ಇತ್ತ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ವಿದೇಶ ಪ್ರವಾಸದ ಬೆನ್ನಲ್ಲೇ ಯಡಿಯೂರಪ್ಪ ಕೂಡ ಯುರೋಪ್ ಪ್ರವಾಸ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
ಕಳೆದ ಭಾನುವಾರ ಎಚ್ ಡಿ ಕುಮಾರಸ್ವಾಮಿ ಅವರು ಕುಟುಂಬ ಸದಸ್ಯರೊಂದಿಗೆ ಸಿಂಗಾಪುರ ಪ್ರವಾಸ ಕೈಗೊಂಡಿದ್ದು, ಆಗಸ್ಟ್ 2ಕ್ಕೆ ವಾಪಸಾಗಲಿದ್ದಾರೆ.ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿರುವ ಕಾಂಗ್ರೆಸ್ ಸರಕಾರದ ಆಡಳಿತ ಸಹಿಸದವರು ಸಿಂಗಾಪುರದಲ್ಲಿ ಕುಳಿತು ಸರಕಾರ ಅಸ್ಥಿರಗೊಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಆರೋಪ ಮಾಡಿದ್ದರು. ಇದು ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳಾದ ನಡುವೆ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಯಿತ್ತು. ಕುಟುಂಬ ಸದಸ್ಯರು, ಆಪ್ತರೊಂದಿಗೆ ಕುಮಾರಸ್ವಾಮಿ ವಿದೇಶ ಪ್ರವಾಸದಲ್ಲಿರುವ ಛಾಯಾಚಿತ್ರಗಳು ಬಹಿರಂಗಗೊಂಡ ಬಳಿಕ ಸದ್ಯ ಊಹಾಪೋಹಗಳಿಗೆ ತೆರೆ ಬಿದ್ದಿದೆ.