ತುಮಕೂರು, ಜು 28 (DaijiworldNews/HR): ತುಮಕೂರಿನ ಗೊಲ್ಲರಹಟ್ಟಿಯಲ್ಲಿ ಮೈಲಿಗೆ ಎಂದು ಬಾಣಂತಿ ಹಾಗೂ ಮಗುವನ್ನ ಕುಟುಂಬಸ್ಥರು ಊರ ಹೊರಗಿಟ್ಟಿದ್ದರಿಂದ ಅನಾರೋಗ್ಯಕ್ಕೆ ತುತ್ತಾಗಿ ಮಗು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಬಾಣಂತಿ ವಸಂತಾ ಪತಿ ಸಿದ್ದೇಶ್, ಮಾವ ಚಿಕ್ಕಹುಲಿಯಪ್ಪ, ಸಿದ್ದೇಶ್ ಕುಟುಂಬ ಹಾಗೂ ಸಮುದಾಯದ ಮುಖಂಡರ ವಿರುದ್ಧ ಕೋರಾ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹಿರಿಯ ಸಿವಿಲ್ ನ್ಯಾಯ್ಯಾಧೀಶರಾದ ನೂರುನ್ನಿಸ್ ಅವರು ಗ್ರಾಮಕ್ಕೆ ಭೇಟಿ ನೀಡಿ ಬಾಣಂತಿ ವಸಂತಾ ಆರೋಗ್ಯ ವಿಚಾರಿಸಿದ್ದು, ಈ ವೇಳೆ ಅವರು ಗ್ರಾಮಸ್ಥರು ಹಾಗೂ ಸ್ಥಳೀಯ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂದಿದ್ದಾರೆ.
ಸಿದ್ದೇಶ್ ಮತ್ತು ವಸಂತಾ ದಂಪತಿಯ ಮಗುವು ಶೀತದಿಂದ ಬಳಲುತ್ತಿದ್ದು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಇನ್ನು ಕುಟುಂಬಸ್ಥರು ಮೈಲಿಗೆ ಎಂಬ ಕಾರಣದಿಂದ ಬಾಣಂತಿ ಹಾಗೂ ಮಗುವನ್ನು ಊರ ಹೊರಗಿಟ್ಟಿದ್ದು, ಗಾಳಿ, ಮಳೆ ಇದ್ದರೂ ಕೂಡ ಮಗು ಮತ್ತು ತಾಯಿಯನ್ನು ಊರ ಹೊರಗೆ ಇರಿಸಲಾಗಿತ್ತು. ಇದರಿಂದ ಮಗುವಿಗೆ ಅನಾರೋಗ್ಯ ಕಾನಿಸಿಕೊಂಡಿತ್ತು ಎನ್ನಲಾಗಿದೆ.
ವಸಂತ ಕಳೆದ ತಿಂಗಳು ಜೂನ್ 22ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಏಳು ತಿಂಗಳಲ್ಲಿ ಹೆರಿಗೆ ಆಗಿದ್ದರಿಂದ ಒಂದು ಮಗು ಸಾವನ್ನಪ್ಪಿದ್ದರೆ, ಇನ್ನೊಂದು ಮಗು ಬದುಕುಳಿದಿತ್ತು.