ಬೆಂಗಳೂರು, ಜು 28 (DaijiworldNews/HR): ಮೂರು ವರ್ಷದ ಹಿಂದೆ ಸೆನೆಗಲ್ನಿಂದ ಹಸ್ತಾಂತರಿಸಲ್ಪಟ್ಟ ಪ್ರಕರಣಗಳ ಶೀಘ್ರ ವಿಚಾರಣೆ ಕೋರಿ ಗ್ಯಾಂಗ್ಸ್ಟರ್ ರವಿ ಪೂಜಾರಿ ಕರ್ನಾಟಕ ಹೈಕೋರ್ಟ್ಗೆ ಮೊರೆ ಹೋಗಿದ್ದಾರೆ.
ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವ ರವಿ ಪೂಜಾರಿ, ನನ್ನನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಸೆನೆಗಲ್ ನ್ಯಾಯಾಲಯದಲ್ಲಿ ನನ್ನ ವಿರುದ್ಧ ಉಲ್ಲೇಖಿಸಿರುವ ಪ್ರಕರಣಗಳಡಿ ಮಾತ್ರ ನನ್ನನ್ನು ವಿಚಾರಣೆಗೆ ಒಳಪಡಿಸಬೇಕು. ಜೊತೆಗೆ ತ್ವರಿತ ವಿಚಾರಣೆ ನಡೆಸಿ ಎಂದು ರವಿ ತಿಳಿಸಿದ್ದಾನೆ.
ಇನ್ನು ರವಿ ಪೂಜಾರಿ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠವು ಈ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವನ್ನು ಕೇಳಿದ್ದು, ವಿಚಾರಣೆಯನ್ನು ಮುಂದೂಡಿದೆ.
ರವಿ ಪೂಜಾರಿ ವಿರುದ್ಧ ಹಸ್ತಾಂತರ ಆದೇಶದಲ್ಲಿ ಉಲ್ಲೇಖವಾಗದೇ ಇರುವ ಪ್ರಕರಣಗಳನ್ನು ವಿಚಾರಣೆ ನಡೆಸಬಹುದೇ ಎಂಬ ಬಗ್ಗೆ ಸ್ಪಷ್ಟನೆಯನ್ನು ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಇನ್ನು ರವಿ ಪೂಜಾರಿ ವಿರುದ್ಧ ವಿವಿಧ ರಾಜ್ಯಗಳಲ್ಲಿ ಅನೇಕ ಪ್ರಕರಣಗಳು ಬಾಕಿಯಿದ್ದರೂ ಸೆನೆಗಲ್ನ ಹಸ್ತಾಂತರ ಆದೇಶದಲ್ಲಿ ಉಲ್ಲೇಖಿಸಲಾದ ಪ್ರಕರಣಗಳಲ್ಲಿ ಮಾತ್ರ ಅವರನ್ನು ವಿಚಾರಣೆಗೊಳಪಡಿಸಬೇಕು. ಹಸ್ತಾಂತರ ಆದೇಶದಲ್ಲಿ ನಮೂದಿಸದ ಇತರ ಪ್ರಕರಣಗಳಲ್ಲಿ ವಿಚಾರಣೆ ನಡೆಸಿದರೆ ಹಸ್ತಾಂತರ ಆದೇಶ ಉಲ್ಲಂಘನೆಯಾಗುತ್ತದೆ ಎಂದು ರವಿ ಪೂಜಾರಿ ಪರ ವಕೀಲರು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.