ಮಂಗಳೂರು, ಜು 28 (DaijiworldNews/SM): ತೀವ್ರ ಕುಸಿತ ಕಂಡಿದ್ದ ಕೊಬ್ಬರಿ ಬೆಲೆ ಸದ್ಯ ಏರಿಕೆಯ ಹಾದಿಯಲ್ಲಿದ್ದು ತೆಂಗು ಬೆಳೆಗಾರರಲ್ಲಿ ಆತ್ಮ ವಿಶ್ವಾಸ ಮೂಡಿಸಿದೆ. ತಿಪಟೂರು ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಕೊಬ್ಬರಿ ಕ್ವಿಂಟಾಲ್ಗೆ ಗರಿಷ್ಠ 10,000 ರೂಪಾಯಿಗಳಿಗೆ ಮಾರಾಟವಾಗಿದೆ. ಇನ್ನು 57 ಸಾವಿರ ದಾಟಿದ ಬಳಿಕ ಅಲ್ಪ ಕುಸಿತ ಕಂಡಿದ್ದ ಅಡಿಕೆ ಕೂಡ ಏರಿಕೆಯಾಗುತ್ತಿದ್ದು ಮತ್ತೆ 57 ಸಾವಿರದ ಸಮೀಪ ಬಂದಿದೆ.
ರಾಜ್ಯದ ಪ್ರಮುಖ ಕೊಬ್ಬರಿ ಮಾರುಕಟ್ಟೆಯಾದ ತಿಪಟೂರಿನಲ್ಲಿ ಕೂಡ ಕೊಬ್ಬರಿ ದರ ಏರಿಕೆ ಕಂಡಿದೆ. ಕ್ವಿಂಟಾಲ್ ಕೊಬ್ಬರಿ ಗರಿಷ್ಠ 10000 ರೂಪಾಯಿಗೆ ಮಾರಾಟವಾಗಿದ್ದರೆ, ಸರಾಸರಿ ದರ 9,500 ರೂಪಾಯಿ ಆಗಿತ್ತು. ಜುಲೈ 26ರಂದು ಗರಿಷ್ಠ ದರ 10,206 ರೂಪಾಯಿವರೆಗೆ ಮಾರಾಟವಾಗಿತ್ತು. ಅರಸೀಕೆರೆ ಕೊಬ್ಬರಿ ಮಾರುಕಟ್ಟೆಯಲ್ಲಿ ಕೊಬ್ಬರಿ ಗರಿಷ್ಠ 10,008 ರೂಪಾಯಿ ತಲುಪಿದೆ.
ತುರುವೇಕೆರೆಯಲ್ಲಿ ಕ್ವಿಂಟಾಲ್ ಕೊಬ್ಬರಿ ದರ ಗರಿಷ್ಠ 10,200 ವರೆಗೆ ಮಾರಾಟವಾಗಿದೆ. ತುಮಕೂರು ಮಾರುಕಟ್ಟೆಯಲ್ಲಿ ಕೂಡ ಕೊಬ್ಬರಿ ಗರಿಷ್ಠ 9,950 ರೂಪಾಯಿವರೆಗೆ ಮಾರಾಟವಾಗಿದೆ. ಕ್ವಿಂಟಾಲ್ ಕೊಬ್ಬರಿ ದರ 7,500 ರೂಪಾಯಿಗಳಿಗೆ ಕುಸಿಯುವ ಮೂಲಕ ಬೆಳೆಗಾರರಲ್ಲಿ ಆತಂಕ ಮೂಡಿಸಿತ್ತು, ಸದ್ಯ ದರ ಏರಿಕೆಯಿಂದ ನಿಟ್ಟುಸಿರು ಬಿಡುವಂತಾಗಿದೆ.