ಬೆಂಗಳೂರು, ಜು 29 (DaijiworldNews/AK): ಕಾಶಿ ಯಾತ್ರೆಗೆ ವಿಶೇಷ ರೈಲು ವ್ಯವಸ್ಥೆಯನ್ನು ರಾಜ್ಯದ ಮುಜರಾಯಿ ಇಲಾಖೆ ಮಾಡಿದೆ. ಇಂದು ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆಯ ನಾಲ್ಕನೇ ರೈಲಿಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ಯಶವಂತಪುರ ರೈಲ್ವೆ ನಿಲ್ದಾಣದಿಂದ ಹೊರಟಿರುವ ಕರ್ನಾಟಕ ಭಾರತ್ ಗೌರವ್ ಕಾಶಿಯಾತ್ರೆ ರೈಲು , ವಾರಣಾಸಿ, ಅಯೋಧ್ಯೆ, ಪ್ರಯಾಗ್ ರಾಜ್ ದರ್ಶನ ಮಾಡಲಿರುವ ಯಾತ್ರ್ರಿಗಳನ್ನು ಕರೆದೊಯ್ಯಲಿದೆ. 8 ದಿನಗಳ ಕಾಶಿ ಯಾತ್ರೆ ಪ್ರವಾಸಕ್ಕೆ ಒಬ್ಬರಿಗೆ 20 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಇದರಲ್ಲಿ ಸಬ್ಸಿಡಿ 5 ಸಾವಿರ ರೂ. ಸರ್ಕಾರದಿಂದ ಸಿಗಲಿದೆ. ಊಟ, ವಸತಿ ವ್ಯವಸ್ಥೆ ಸಹ ಇರಲಿದೆ. 700 ಸೀಟ್ ಸಾಮರ್ಥ್ಯ ಹೊಂದಿರುವ ರೈಲಿನಲ್ಲಿ ಈಗಾಗಲೇ 403 ಸೀಟ್ ಬುಕ್ಕಿಂಗ್ ಆಗಿದೆ ಎಂದರು.
ಯಶವಂತಪುರ ರೈಲು ನಿಲ್ದಾಣದಿಂದ ಕಾಶಿಗೆ ತಲುಪಲು ಎರಡು ದಿನ ಬೇಕಾಗುತ್ತದೆ. ವಾರಣಾಸಿಗೆ ತಲುಪಿದ ಬಳಿಕ ಗಂಗಾ ಸ್ನಾನ, ತುಳಸಿ ಮಂದಿರ ದರ್ಶನ, ಶ್ರೀ ಹನ್ಮಾನ್ ದರ್ಶನ, ಕಾಶಿ ವಿಶ್ವನಾಥ ದರ್ಶನ ಪಡೆದ ಬಳಿಕ ಒಂದು ದಿನ ಕಾಶಿಯಲ್ಲಿ ವಾಸ. ಬಳಿಕ 5ನೇ ದಿನ ವಾರಣಾಸಿಯಿಂದ ಆಯೋಧ್ಯೆಗೆ ತೆರಳಿ ಶ್ರೀರಾಮ ಭೂಮಿ ದರ್ಶನ ಮಾಡಿ, ಸಂಜೆ ಸರಾಯು ಆರತಿ ವೀಕ್ಷಣೆ ಮಾಡುವುದು. ಬಳಿಕ 6ನೇ ದಿನ ಪ್ರಯಾಗ್ ರಾಜ್ ರೈಲು ತಲುಪಲಿದೆ. ಬಳಿಕ ತ್ರಿವೇಣಿ ಸಂಗಮ ಸ್ನಾನ, ಶ್ರೀ ಹನುಮಾನ್ ಮಂದಿರ ದರ್ಶನ ಇರಲಿದೆ. ಬಳಿಕ ಅದೇ ದಿನ ಪ್ರಯಾಗ್ ರಾಜ್ನಿಂದ ಬೆಂಗಳೂರಿಗೆ ರೈಲು ಹೊರಡಲಿದೆ ಎಂದು ರಾಮಲಿಂಗರೆಡ್ಡಿ ಮಾಹಿತಿ ನೀಡಿದ್ದಾರೆ.
ಈಗಾಗಲೇ ಕಾಶಿಯಾತ್ರೆಯ ಮೂರು ಟ್ರಿಪ್ ಮುಗಿದಿದೆ. ಇದು ನಾಲ್ಕನೇ ಟ್ರಿಪ್ ಇದಾಗಿದೆ. ರೈಲಿನಲ್ಲಿ ರಾಜ್ಯ ಆರೋಗ್ಯ ಇಲಾಖೆಯ ಇಬ್ಬರು ವೈದ್ಯರು ಇರಲಿದ್ದಾರೆ. ಆಗಸ್ಟ್ 15ಕ್ಕೆ ಮತ್ತೆ 5ನೇ ಕಾಶಿಯಾತ್ರೆ ಆರಂಭವಾಗಲಿದೆ. ಯಶವಂತಪುರ, ದಾವಣಗೆರೆ, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗದಲ್ಲಿ ನಿಲ್ದಾಣದ ವ್ಯವಸ್ಥೆ ಮಾಡಲಾಗಿದೆ