ಬೆಂಗಳೂರು, ಜು 30 (DaijiworldNews/HR): ರಾಜ್ಯದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಸದ್ಯದಲ್ಲೇ ಅಧಿಕೃತವಾಗಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಿರುವ ಬೆನ್ನಲ್ಲೇ ಬೆಂಗಳೂರಿನ ಎನ್ಐಎ ಅಧಿಕಾರಿಗಳು ಸಿಸಿಬಿ ಪೊಲೀಸರು ಬಂಧಿಸಿರುವ ಐವರು ಶಂಕಿತರ ಪ್ರಾಥಮಿಕ ವಿಚಾರಣೆ ನಡೆಸಿ ವರದಿಯನ್ನು ಕೇಂದ್ರ ಕಚೇರಿಗೆ ರವಾನೆ ಮಾಡಿದ್ದಾರೆ.
ಐವರು ಶಂಕಿತರು ಲಷ್ಕರ್-ಎ-ತಯ್ಯಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಯಲ್ಲಿ ಸಕ್ರಿಯವಾಗಿರುವುದು ಪತ್ತೆಯಾಗಿದ್ದು, ನಾಜೀರ್ನಿಂದ ಪ್ರಚೋದನೆಗೊಂಡ ಉಗ್ರ ಸಂಘಟನೆ ಸೇರಿದ ಶಂಕಿತರು, ಶಸ್ತ್ರಾಸ್ತ್ರ ಸ್ವೀಕರಿಸುವಾಗ ಆಣೆ ಪ್ರಮಾಣ ಮಾಡಿದ್ದರು ಎಂಬುದು ತಿಳಿದು ಬಂದಿದೆ.
ಇನ್ನು ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿ ನಾಜೀರ್ ಪ್ರಚೋದನೆ ಮೇರೆಗೆ ಅರಬ್ ರಾಷ್ಟ್ರದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಉಗ್ರ ಸಂಘಟನೆ ಸದಸ್ಯರನ್ನು ಸಂಪರ್ಕಿಸಿದ್ದು, ಅವರಿಂದ ಲಕ್ಷಾಂತರ ರೂ. ಪಡೆದುಕೊಂಡು ತನ್ನ ಸಹಚರರಿಗೆ ಹಂಚಿದ್ದಾನೆ. ವಿದೇಶದಿಂದಲೇ ಜುನೈದ್ಗೆ ಹಣ ಸಂದಾಯವಾಗಿರುವ ಮಾಹಿತಿ ಸಿಕ್ಕಿದೆ. ಜತೆಗೆ ಎಲ್ಇಟಿ ಉಗ್ರರು ಕೂಡ ಜುನೈದ್ ಹಾಗೂ ಇತರ ಶಂಕಿತರಿಗೆ ಕೆಲವು ಟಾಸ್ಕ್ ಗಳನ್ನು ನೀಡಿದ್ದರು ಎನ್ನಲಾಗಿದೆ.
ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಬೆಂಗಳೂರಿನ ಎನ್ಐಎ ಅಧಿಕಾರಿಗಳು ಕೇಂದ್ರ ಕಚೇರಿಗೆ ವರದಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.