ನವದೆಹಲಿ, ಏ 04(MSP): ಗೂಗಲ್ ಏ.4 ರ ಗುರುವಾರದಂದು ರಾಜಕೀಯ ಪಕ್ಷಗಳು ನೀಡಿದ ಜಾಹೀರಾತಿನ ’ಪಾರದರ್ಶಕ ವರದಿ’ ಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಆಡಳಿತಾರೂಢ ಬಿಜೆಪಿ ನಂಬರ್ ವನ್ ಸ್ಥಾನದಲ್ಲಿದ್ದರೆ ಕಾಂಗ್ರೆಸ್ ಪಕ್ಷ ಆರನೇ ಸ್ಥಾನದಲ್ಲಿದೆ.
ಗೂಗಲ್ ಸಂಸ್ಥೆಗೆ ಭಾರತದ ರಾಜಕೀಯ ಪಕ್ಷಗಳು ಮತ್ತು ಅದರ ಸಹ ಸಂಸ್ಥೆಗಳು ಕಳೆದ ಫೆಬ್ರುವರಿ 19ರಿಂದ ಬಳಿಕ ಅಂದಾಜು ರೂ 3.76 ಕೋಟಿಯಷ್ಟು ಚುನಾವಣಾ ಜಾಹೀರಾತು ನೀಡಿವೆ. ಗೂಗಲ್ ಪಾರದರ್ಶಕತೆ ಕಾದುಕೊಳ್ಳುವ ಸಲುವಾಗಿ ಸಮಗ್ರ ಮಾಹಿತಿಯನ್ನು ಬಹಿರಂಗವಾಗಿ ಘೋಷಿಸಿಕೊಂಡಿದ್ದು ಹೀಗಾಗಿ ಯಾವ ಪಕ್ಷ ಎಷ್ಟು ಹಣ ಜಾಹೀರಾತಿಗಾಗಿ ಖರ್ಚು ಮಾಡಿದೆ ಎನ್ನುವುದನ್ನು ಬಹಿರಂಗಪಡಿಸಿದೆ.
ಗೂಗಲ್ ನಲ್ಲಿ ಯಾವುದೇ ಜಾಹೀರಾತು ನೀಡುವ ಮುನ್ನ ಪ್ರತಿ ಜಾಹೀರಾತಿಗೂ ಚುನಾವಣೆ ಆಯೋಗ ನೀಡಿರುವ ಪ್ರಮಾಣ ಪತ್ರವನ್ನು ಗೂಗಲ್ ಗೆ ಸಲ್ಲಿಸಬೇಕಾಗಿತ್ತು. ಅದರಂತೆ ಫೆ.19ರಿಂದ ಇತ್ತೀಚಿನವರೆಗೆ ಎಲ್ಲ ಪಕ್ಷಗಳಿಂದಲೂ ರೂ. 3.76 ಕೋಟಿ ಮೊತ್ತದ 831 ಜಾಹೀರಾತುಗಳು ಪ್ರಕಟವಾಗಿರುವುದಾಗಿ ಗೂಗಲ್ ಸಂಸ್ಥೆ ವರದಿಯಲ್ಲಿ ತಿಳಿಸಿದೆ.
ಇದರಲ್ಲಿ ಬಿಜೆಪಿಯೂ 554 ಜಾಹೀರಾತು ನೀಡಿ 1.21 ಕೋಟಿ ಖರ್ಚು ಮಾಡಿದ್ರೆ ನಂಬರ್ ವನ್ ಸ್ಥಾನದಲ್ಲಿದ್ರೆ, ದ್ವಿತೀಯ ಸ್ಥಾನದಲ್ಲಿ ಆಂಧ್ರಪ್ರದೇಶದ ವೈ.ಎಸ್ ಜಗನ್ ಮೋಹನ್ ರೆಡ್ಡಿ ಅವರ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷವಿದೆ.
ಆದರೆ ಕಾಂಗ್ರೆಸ್ ಮಾತ್ರ ಕೇವಲ 54,100 ರೂ ಖರ್ಚು ಮಾಡಿ 14 ಜಾಹಿರಾತುಗಳನ್ನು ಮಾತ್ರ ನೀಡಿ ಗೂಗಲ್ನ ಚುನಾವಣಾ ಜಾಹಿರಾತುದಾರರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.