ಜೈಪುರ,ಜು 30 (DaijiworldNews/AK): ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದ ಗೆಳೆಯನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೊರಟಿದ್ದ ರಾಜಸ್ಥಾನದ 17 ವರ್ಷದ ಬಾಲಕಿಯನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಶನಿವಾರ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಇತ್ತೀಚೆಗೆ ಫೇಸ್ಬುಕ್, ಇನ್ಸ್ಟಾಗ್ರಾಂ, ಅನ್ಲೈನ್ ಗೇಮ್ ಮೂಲಕ ಪರಿಚಯವಾಗುವ ಸ್ನೇಹಿತರ ಭೇಟಿ ಮಾಡಲು ತೆರಳುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಇದರ ಬೆನ್ನಲೇ ಇದೀಗ ರಾಜಸ್ಥಾನದ ಸಿಕರ್ ಜಿಲ್ಲೆಯ ಶ್ರೀಮಾಧೋಪುರ್ ಪ್ರದೇಶದ ನಿವಾಸಿಯಗಿರುವ ಯುವತಿ ತನ್ನ ಪ್ರಿಯತಮನ ಭೇಟಿಗೆ ದೇಶ ಬಿಟ್ಟು ಹೋಗಲು ಯತ್ನಿಸಿದಾಗ ಪೊಲೀಸರ ವಶ ಪಡೆದಿದ್ದಾರೆ.
ಇಬ್ಬರು ಸ್ನೇಹಿತರೊಂದಿಗೆ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದ ಯುವತಿ, ಪಾಕಿಸ್ತಾನಕ್ಕೆ ಹೋಗಲು ವಿಮಾನ ಟಿಕೆಟ್ ನೀಡುವಂತೆ ಕೇಳಿದ್ದಾರೆ. ಅನುಮಾನಗೊಂಡ ಸಿಬ್ಬಂದಿ ವಿಚಾರಿಸಿದಾಗ ಬಾಲಕಿ ಸುಳ್ಳು ಹೇಳಿ ಟಿಕೆಟ್ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಸಂಶಯ ಉಂಟಾಗಿದೆ.
ಟಿಕೆಟ್ ನೀಡಲು ಸಿಬ್ಬಂದಿ ನಿರಾಕರಿಸಿದಾಗ ತಾನು ಪಾಕಿಸ್ತಾನ ಪ್ರಜೆ ಎಂದು ಬಾಲಕಿ ಹೇಳಿಕೊಂಡಿದ್ದಾಳೆ. ಲಾಹೋರ್ ಸಮೀಪದ ಇಸ್ಲಾಮಾಬಾದ್ ನಮ್ಮ ಊರು. ಮೂರು ವರ್ಷಗಳ ಹಿಂದೆ ಸಂಬಂಧಿಕರೊಂದಿಗೆ ಭಾರತಕ್ಕೆ ಬಂದಿದ್ದೆ. ಈಗ ವಾಪಸ್ ಹೋಗಬೇಕು ಎಂದು ತಿಳಿಸಿದ್ದಾರೆ. ದಾಖಲೆ ಪರಿಶೀಲಿಸಿದಾಗ ಯವತಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬುದು ತಿಳಿದು ಬಂದಿದೆ. ಬಳಿಕ ನಿಲ್ದಾಣದಲ್ಲಿ ಮಹಿಳಾ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಯುವತಿ ರಾಜಸ್ಥಾನದ ಸಿಕರ್ ಜಿಲ್ಲೆಯ ಶ್ರೀಮಾಧೋಪುರಕ್ಕೆ ಸೇರಿದವರು ಎಂಬ ಮಾಹಿತಿ ಪತ್ತೆಯಾಗಿದೆ. ತಕ್ಷಣ ಜೈಪುರ ನಗರ ಪೊಲೀಸರಿಗೆ ಮಾಹಿತಿ ನೀಡಿದ ವಿಮಾನ ನಿಲ್ದಾಣದ ಸಿಬ್ಬಂದಿ ಯುವತಿಯನ್ನ ವಶಕ್ಕೆ ನೀಡಿದ್ದಾರೆ.