ಮೈಸೂರು, ಏ 05 (MSP): ಜೆಡಿಎಸ್ ಮುಖಂಡರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಜೆಡಿಎಸ್ ಕಾರ್ಯಕರ್ತರು ಜೈಕಾರ ಹಾಕಿದ ಘಟನೆ ನಡೆದಿದೆ. ಮೈತ್ರಿ ಅಭ್ಯರ್ಥಿ ಪರ ಪ್ರಚಾರದ ಕುರಿತು ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಚರ್ಚೆ ನಡೆಯುತ್ತಿದ್ದ ಸಂದರ್ಭ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿ ಎಂದಿದ್ದಕ್ಕೆ ಸಿಡಿಮಿಡಿಗೊಂಡ ಕಾರ್ಯಕರ್ತರು ಮೋದಿ ಪರ ಘೋಷಣೆ ಕೂಗಿದರು.
ಹತ್ತು ತಿಂಗಳ ಹಿಂದೆ ನಡೆದ ವಿಧಾನಸಭೆಯ ಚುನಾವಣೆಯ ಸಂದರ್ಭ ಇದ್ದ ಪರಿಸ್ಥಿತಿಗೂ ಇಂದಿಗೂ ಬಹಳಷ್ಟು ವ್ಯತ್ಯಾಸಗಳಾಗಿವೆ. ಅಂದು ನೀವೆಲ್ಲರೂ ಜೆಡಿಎಸ್ ಅಭ್ಯರ್ಥಿಗಳ ಕೆಲಸ ಮಾಡಿದ್ದೀರಿ. ಆದರೆ ಇಂದು ನೀವೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಬೇಕಿದೆ ಎಂದರು.
ಆಗ ಸಿಟ್ಟಿಗೆದ್ದ ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್ ವಿರುದ್ದ ಹೋರಾಡಿ ಜೆಡಿಎಸ್ ಪರ ಕೆಲಸ ಮಾಡಿ ಪೊಲೀಸ್ ಸ್ಟೇಷನ್, ಕೋರ್ಟ್ ಮೆಟ್ಟಿಲು ಹತ್ತಿದ್ದೇವೆ. ಈಗ ನೀವು ನಾಯಕರು ಒಪ್ಪಂದ ಮಾಡಿಕೊಂಡಿದ್ದೀರಿ. ಈ ಕಾರಣಕ್ಕೆ ನಾವೆಲ್ಲಾ ವೋಟ್ ಹಾಕಬೇಕಾ, ಕೆಲಸ ಮಾಡಬೇಕಾ ಎಂದು ಪ್ರಶ್ನಿಸಿ ಜೋರಾಗಿ ಪ್ರಶ್ನಿಸಿದ್ದು ಮಾತ್ರವಲ್ಲದೆ ನರೇಂದ್ರ ಮೋದಿಗೆ ಜೈ ಎಂದು ಜೈಕಾರ ಹಾಕಿದ್ರು.
ನಂತರ ಜಿ.ಟಿ.ದೇವೇಗೌಡ ಕಾರ್ಯಕರ್ತರ ಬಳಿ ಬಂದು ಸಮಾಧಾನಗೊಳಿಸಿ 'ಜೆಡಿಎಸ್ ಪಕ್ಷಕ್ಕೆ ಜೈ' ಎಂದು ಜೈಕಾರ ಹಾಕುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು.