ಬೆಂಗಳೂರು ಏ 05 (MSP): ಏಪ್ರಿಲ್ ಮೂರನೇ ವಾರದಲ್ಲಿ ಪಿಯುಸಿ ಮತ್ತು 4 ನೇ ವಾರಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ ಬಿಡುಗಡೆ ಮಾಡಲು ಶಿಕ್ಷಣ ಇಲಾಖೆ ಬಿರುಸಿನಲ್ಲಿ ಮೌಲ್ಯಮಾಪನ ನಡೆಸುತ್ತಿದೆ. ಪಿಯು ಮೌಲ್ಯಮಾಪನ ಕಾರ್ಯ ಪ್ರಗತಿಯಲ್ಲಿದ್ದು, 10 ದಿನಗಳಲ್ಲಿ ಮುಗಿಯುವ ಸಾಧ್ಯತೆ ಇದೆ. ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಏ.10 ಕ್ಕೆ ಆರಂಭವಾಗಲಿದ್ದು ಚುನಾವಣೆ ಅಡ್ಡಿಯಾಗುವುದರಿಂದ ಮೌಲ್ಯಮಾಪನಕ್ಕೆ ತೊಡಕು ಉಂಟಾಗಲಿದೆ.
ಮೂರನೇ ವಾರದಲ್ಲಿ ಪಿಯುಸಿ ಹಾಗೂ ಏಪ್ರಿಲ್ ಕೊನೆ ವಾರದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಬಿಡುಗಡೆ ಮಾಡಲು ಶಿಕ್ಷಣ ಇಲಾಖೆ ಚುರುಕಿನಿಂದ ಕೆಲಸ ಮಾಡುತ್ತಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಉತ್ತರಪತ್ರಿಕೆಗಳ ಮೌಲ್ಯಮಾಪನಕ್ಕೆ ವೇಗ ನೀಡಿದೆ.
ಇನ್ನು ಎಸ್ಸೆಸ್ಸೆಲ್ಸಿ ಮೌಲ್ಯಮಾಪಕರ ಸಂಭಾವನೆ ಮತ್ತು ದಿನಭತ್ಯೆಯನ್ನು ರಾಜ್ಯ ಸರ್ಕಾರ ಶೇ.5 ಹೆಚ್ಚಳ ಮಾಡಿದೆ. ಪ್ರಸ್ತುತ ಪ್ರಥಮ ಭಾಷೆ ಉತ್ತರಪತ್ರಿಕೆ ಮೌಲ್ಯಮಾಪನಕ್ಕೆ 17.20 ರೂ., ದ್ವಿತೀಯ ಮತ್ತು ತೃತೀಯ ಭಾಷೆಗೆ 15.60 ರೂ. ಹಾಗೂ ಐಚ್ಛಿಕ ವಿಷಯಗಳಿಗೆ 16.60 ರೂ. ನೀಡಲಾಗುತ್ತಿದೆ. ಇದಲ್ಲದೆ ದಿನಭತ್ಯೆಯನ್ನು ಹೆಚ್ಚು ಮಾಡಲಾಗಿದೆ. ಈ ನಡುವೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ತೃತೀಯ ಭಾಷೆ ವಿಷಯಗಳು ಮತ್ತು ಎನ್ಎಸ್ಕ್ಯೂಎಫ್ ವಿಷಯಗಳ ಕೀ ಉತ್ತರಗಳನ್ನು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿದೆ.